ಬಿಜೆಪಿ ರೈತ ಮೊರ್ಚಾ ರಾಜ್ಯ ಕಾರ್ಯದರ್ಶಿ ಸಂಜಯ ಪಾಟೀಲ ಕನಮಡಿ ಆರೋಪ
ತಿಕೋಟಾ: ಬಿಜೆಪಿ ಸರ್ಕಾರ ಈ ಹಿಂದೆ ಜಾರಿಗೆ ತಂದ ರೈತ ಪರವಾದ ಯೋಜನೆಗಳಾದ ಕಿಸಾನ್ ಸಮ್ಮಾನ ನಿಧಿ, ರೈತ ವಿದ್ಯಾನಿಧಿ, ಭೂ ಚೇತನ, ಭೂ ಸಿರಿ, ರೈತ ಶಕ್ತಿ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸೇರಿದಂತೆ ಅನೇಕ ಯೋಜನೆಗಳನ್ನು ಅನುದಾನದ ಕೊರತೆ ಎಂಬ ನೆಪವೊಡ್ಡಿ ಈಗಿರುವ ಕಾಂಗ್ರೇಸ್ ಸರ್ಕಾರ ರದ್ದು ಮಾಡಿದೆ ಎಂದು ರಾಜ್ಯ ರೈತ ಮೊರ್ಚಾ ಕಾರ್ಯದರ್ಶಿ ಸಂಜಯ ಪಾಟೀಲ ಕನಮಡಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಕಂಗಾಲದ ರೈತರ ಗಾಯದ ಮೇಲೆ ಬರೆ ಎಳೆದ ಕಾಂಗ್ರೇಸ್ ಸರ್ಕಾರ ಇನ್ನು ಮುಂದೆ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪಡೆಯಬೇಕಾದರೇ ಸ್ವಂತ ಖರ್ಚಿನಲ್ಲಿ ಟ್ರಾನ್ಸ್‌ಫಾರ್ಮರ್, ಕಂಬ ಮತ್ತು ತಂತಿ ಸೇರಿದಂತೆ ವಿದ್ಯುತ್‌ಗೆ ಸಂಬಂಧಪಟ್ಟ ವಸ್ತುಗಳನ್ನು ರೈತರೇ ಖರೀದಿಸಬೇಕೆಂದು ಸರ್ಕಾರ ಆದೇಶ ಮಾಡಿದ್ದು, ಇದು ಅತ್ಯಂತ ಖಂಡನೀಯವಾಗಿದೆ. ಈ ಹಿಂದೆ ಪ್ರತಿ ನೀರಾವರಿ ಪಂಪಸೆಟ್‌ಗಳಿಗೆ ಕೇವಲ ₹ 24 ಸಾವಿರ ಶುಲ್ಕ ನಿಗದಿಯಾಗಿತ್ತು. ಸರ್ಕಾರದ ಈ ಆದೇಶದಿಂದ ಕನಿಷ್ಠ ₹ 2 ಲಕ್ಷ ನೀಡಿ ವಿದ್ಯುತ್ ಸಂಪರ್ಕ ಪಡೆಯಬೇಕಾದ ಅನಿವಾರ್ಯತೆಗೆ ರೈತರಿಗೆ ಎದುರಾಗಿದೆ ಎಂದರು.
ರಾಜ್ಯದಲ್ಲಿ ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲಿಕ್ಕೆ ರೈತರು ತೆರದ ಬಾವಿ, ಕೊಳವೆ ಬಾವಿಗಳ ಮೋರೆ ಹೋಗಿದ್ದಾರೆ. ಆದರೆ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆಯಾಗಲಾರದೇ ಅನಿಯಮಿತ ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ರೈತರು ಬಸವಳಿದು ಹೋಗುವಂತಾಗಿದೆ. ವಿದ್ಯುತ್ ಆಭಾವ, ರೈತರ ಆತ್ಮಹತ್ಯೆ ಹಾಗೂ ಬರ ಪೀಡಿತ ಪ್ರದೇಶದ ರೈತರ ಸಹಾಯಕ್ಕೆ ಬರಬೇಕಾದ ಸರ್ಕಾರ ಮತ್ತು ಉಸ್ತುವಾರಿ ಮಂತ್ರಿಗಳು ಯಾವುದೇ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ.
ಹೀಗಾಗಿ ರೈತನ ಬದುಕು ಅತ್ಯಂತ ಅಸಹನಿಯವಾಗಿದೆ. ರೈತರ ಕೃಷಿ ಪಂಪಸೆಟ್‌ಗಳಿಗೆ ಸ್ವಂತ ಖರ್ಚಿನಲ್ಲಿಯೇ ಹೊಸ ಸಂಪರ್ಕ ಪಡೆಯುವ ಆದೇಶವನ್ನು ಸರ್ಕಾರ ರದ್ದುಗೊಳಿಸಿ, ಈ ಹಿಂದಿನಂತೆಯೇ ವಿದ್ಯುತ್ ಸಂಪರ್ಕ ನೀಡಬೇಕಾಗಿ ಸರ್ಕಾರವನ್ನು ಕರ್ನಾಟಕ ಬಿಜೆಪಿ ರೈತ ಮೋರ್ಚಾ ಒತ್ತಾಯಿಸುತ್ತದೆ. ಒಂದು ವೇಳೆ ಈ ಆದೇಶವನ್ನು ಹಿಂಪಡೆಯದಿದ್ದರೇ ರಾಜ್ಯದ ಸುಮಾರು 35 ಲಕ್ಷ ಪಂಪಸೆಟ್‌ಗಳ ರೈತ ಬಳಕೆದಾರರೊಂದಿಗೆ ಬಿಜೆಪಿ ರೈತ ಮೋರ್ಚಾ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿಜುಗೌಡ ಎಸ್.ಪಾಟೀಲ, ಮಾಜಿ ಜಿಲ್ಲಾ ಪಂಚಾಯತಿ ಅದ್ಯಕ್ಷ ಉಮೇಶ ಕೋಳಕೂರ, ಈರಣ್ಣ ಶಿರಮಗೊಂಡ, ಪ್ರಶಾಂತ ಕಕಮರಿ, ರಾಜೇಂದ್ರ ಕುಲಕರ್ಣಿ, ವಾಮನ್ ಸೊಂಡುರ, ಬಸಲಿಂಗ ಜಂಗಮಶೆಟ್ಟಿ, ಮಲ್ಲಿಕಾರ್ಜುನ ತುಳಜನವರ, ರಮೇಶ ಮರೇಬಾಗಿ, ಗಿರೀಶ ಕುಲಕರ್ಣಿ, ಮಾನಿಂಗ ಮಂಟೂರ, ಶ್ರೀಶೈಲ ಬೂಸಗೊಂಡ, ಸಿದ್ದು ಪೂಜಾರಿ ಇದ್ದರು.