ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆ ವಿಚಾರ ರಾಷ್ಟ್ರ ರಾಜಕಾರಣದಲ್ಲೂ ಸದ್ದು ಮಾಡುತ್ತಿದ್ದು, ಸಿದ್ದರಾಮಯ್ಯ ಅವರ ಸಿಎಂ ಸ್ಥಾನ ಎಷ್ಟು ದಿನ ಇರುತ್ತದೆ ಗೊತ್ತಿಲ್ಲ ಎಂದು ಮೋದಿ ವ್ಯಂಗ್ಯವಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಿದ್ದರಾಮಯ್ಯ, ಈಗಿನ ಮುಖ್ಯಮಂತ್ರಿಗಳು ಎಷ್ಟು ಅವಧಿಗೆ ಮುಖ್ಯಮಂತ್ರಿಗಳಾಗಿ ಉಳಿಯಲಿದ್ದಾರೆ ಎಂಬ ಪ್ರಧಾನಿಯವರ ರಾಜಕೀಯ ಭಾಷಣದಲ್ಲಿನ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಕೇವಲ ಆರೋಪ ಮಾಡಬೇಕೆಂಬ ಉದ್ದೇಶದಿಂದ ಆರೋಪ ಮಾಡಲಾಗುತ್ತಿದ್ದು, ಇವೆಲ್ಲವೂ ಸುಳ್ಳಿನ ಕಂತೆ ಎಂದರು.
ಮಧ್ಯಪ್ರದೇಶದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕರ್ನಾಟಕವನ್ನೇ ಗುರಿ ಮಾಡಿ ಮಾತನಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಚಾರ ಮಾಡಿದಲ್ಲೆಲ್ಲಾ ಬಿಜೆಪಿ ಸೋತಿದೆ. ರಾಜ್ಯದಲ್ಲಿ ಇದುವರೆಗೆ ವಿರೋಧಪಕ್ಷದ ನಾಯಕರನ್ನು ಆಯ್ಕೆಮಾಡಿಲ್ಲ. ಇದು ಬಿಜೆಪಿಯು ದಿವಾಳಿಯಾಗಿರುವುದನ್ನು ಸೂಚಿಸುತ್ತದೆ ಎಂದರು.
ಸಿಎಂ ಮತ್ತು ಡಿಸಿಎಂ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಪ್ರಧಾನಮಂತ್ರಿಗಳ ಭಾಷಣದಲ್ಲಿ ಮಾಡಿರುವ ಟೀಕೆಗೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, 40 ಪರ್ಸೆಂಟ್ ಕಮೀಷನ್ ಸರ್ಕಾರ ಎಂಬ ಆರೋಪ ಬಿಜೆಪಿ ಸರ್ಕಾರದ ಮೇಲಿತ್ತು. ಈ ಬಗ್ಗೆ ನಮ್ಮ ಸರ್ಕಾರ ತನಿಖೆ ಮಾಡಿಸುತ್ತಿದೆ. ದೇಶದ ಪ್ರಧಾನಿಯಾದವರು ಈ ವಿಷಯದ ಬಗ್ಗೆಯೂ ಮಾತನಾಡಬೇಕಲ್ಲವೇ? ಕೇಂದ್ರ ಸರ್ಕಾರದ ಅಧೀನದಲ್ಲಿ ಎಲ್ಲ ತನಿಖಾ ಸಂಸ್ಥೆಗಳಿವೆ, ಪುರಾವೆಗಳು, ದಾಖಲೆಗಳಿಲ್ಲದೇ ಆರೋಪ ಮಾಡಬಾರದು.
ಇಂದು ಇಡೀ ದೇಶವೇ ದಿವಾಳಿಯಾಗಿದೆ. ರಾಜ್ಯದ ವಿರುದ್ಧ ಕೇಂದ್ರ ಮಲತಾಯಿ ಧೋರಣೆಯನ್ನು ತಳೆದಿದೆ. ಬರಗಾಲದ ಪರಿಹಾರವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದರು. ಆದರೆ ನಮ್ಮ ಸರ್ಕಾರ ಅವುಗಳನ್ನು ಸಾಧಿಸಿ ತೋರಿಸಿದೆ. ಇಂತಹ ಹೇಳಿಕೆಗಳನ್ನು ದೇಶದ ಪ್ರಧಾನ ಮಂತ್ರಿಗಳಿಂದ ಅಪೇಕ್ಷಿಸಿರಲಿಲ್ಲ. ತಮ್ಮ ರಾಜಕೀಯ ಭಾಷಣದಲ್ಲಿ ರಾಜ್ಯದ ಬಗ್ಗೆ ಟೀಕೆಗಳನ್ನು ಮಾಡುವುದು ಪ್ರಧಾನಮಂತ್ರಿಯವರಿಗೆ ಶೋಭೆ ತರುವಂಥದ್ದಲ್ಲ ಎಂದರು.
Related Posts
Add A Comment