ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿರುವ ಬಿ. ಎಲ್. ಡಿ. ಇ ಸಂಸ್ಥೆಯ ಎ. ಬಿ. ಜತ್ತಿ ಶಾಲೆಯ ಮೈದಾನದಲ್ಲಿ ಶನಿವಾರ ಮಕ್ಕಳ ವಿಜ್ಞಾನ ಜಾತ್ರೆಯ ಕಹಳೆ ಮೊಳಗಲಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆ ಮುಗಿದಿವೆ.
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಆಶಯದಂತೆ ‘ಮಕ್ಕಳ ದಿನ’ವನ್ನು ಹೀಗೆ ಜಾತ್ರೆಯಾಗಿ ಮಾರ್ಪಡಿಸುತ್ತಿರುವುದು ವಿಶೇಷ. ಬಂದ ಅತಿಥಿಗಳನ್ನು ದ್ರೋಣ ಮೂಲಕ ಸ್ವಾಗತ ಬರಹದೊಂದಿಗೆ ಬರಮಾಡಿಕೊಳ್ಳುವ ವಿಶಿಷ್ಟ ವಿಧಾನ ಅನುಸರಿಸಲಾಗಿದೆ. ಅವರನ್ನು ಸತ್ಕರಿಸುವುದರಿಂದ ಹಿಡಿದು, ಗೌರವ ಸಮರ್ಪಿಸುವ ತನಕ ಎಲ್ಲವೂ ವಿಜ್ಞಾನದ ಆಧಾರದಲ್ಲೇ ತಯಾರಿಸಲಾದ ವಸ್ತು ವಿಶೇಷತೆಗಳಿಂದ ಕೂಡಿದ್ದು, ಹೊಸ ಮುನ್ನುಡಿಗೆ ಸಾಕ್ಷಿಯಾಗಲಿದೆ. ಅತಿಥಿಗಳಿಗೆ ಕೊಡುವ ಸ್ಮರಣಿಕೆಗಳು ಕೂಡ ವಿಜ್ಞಾನದ ಪ್ರಯೋಗಗಳ ಭಾಗವೇ ಅಗಿವೆ ಎಂದು ಪ್ರಕಟಣೆ ತಿಳಿಸಿದೆ.
ಇನ್ನೂರಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳು ತಾವೇ ತಯಾರಿಸಿದ ಸುಮಾರು 120 ವೈಜ್ಞಾನಿಕ ಪ್ರಯೋಗಗಳನ್ನು ಖುಷಿಯಿಂದ ವಿವರಿಸಿ, ಅವನ್ನು ತೋರಿಸಲು ಮುಂದಾಗಿದ್ದಾರೆ. ನೋಡುಗರ ಕುತೂಹಲ, ಮಕ್ಕಳ ಉತ್ಸಾಹ ತಣಿಯಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇದ್ದು, ಗ್ರಾಮೀಣ ಭಾಗದ ಅದರಲ್ಲೂ ಸರಕಾರಿ ಶಾಲೆಯ ಮಕ್ಕಳ ವಿಜ್ಞಾನದ ಓದಿಗೆ ಈ ಜಾತ್ರೆ ವರದಾನವಾಗಲಿದೆ.
ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಗಸ್ತ್ಯ ಫೌಂಡೇಶನ್ ಸಹಯೋಗದಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿವೆ. ಓದುವ ವಿಜ್ಞಾನವನ್ನು ನೇರವಾಗಿ ನೋಡುವ, ಮುಟ್ಟುವ ಮತ್ತು ಪ್ರಯೋಗಗಳ ಮೂಲಕ ತಿಳಿಯುವ ಅವಕಾಶ ಮಕ್ಕಳಿಗೆ ದೊರೆಯಲಿದೆ.

