ನಾವು ನಮ್ಮ ಮುಂದಿನ ಪೀಳಿಗೆಯ ಉಳಿವಿಗಾಗಿ ಜಲ ಸಂರಕ್ಷಣೆಯನ್ನು ಮಾಡಲೇಬೇಕಾಗಿದೆ. ನೀರಿನ ದುರುಪಯೋಗದ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು. ಎಲ್ಲೆಲ್ಲಿ ನಾವು ನೀರಿನ ದುರ್ಬಳಕೆಯನ್ನು ತಪ್ಪಿಸಬಹುದು ಎಂಬುದನ್ನು ಅರಿತು ಅಂತೆಯೇ ಕಾರ್ಯನಿರ್ವಹಿಸಲು ಮಕ್ಕಳನ್ನು ಸೇರಿದಂತೆ ನಾವು ಕೂಡ ಯುದ್ದೋಪಾದಿಯಲ್ಲಿ ಜಲ ಮೂಲಗಳನ್ನು ಸಂರಕ್ಷಿಸಬೇಕು.
– ವೀಣಾ ಹೇಮಂತಗೌಡ ಪಾಟೀಲ್.
ಮುಂಡರಗಿ – ಗದಗ
ಉದಯರಶ್ಮಿ ದಿನಪತ್ರಿಕೆ
ನಮ್ಮ ಬದುಕಿನಲ್ಲಿ ಅತ್ಯವಶ್ಯಕವಾದ ನೀರನ್ನು ನಾವು ಜಲ,ಎಂದು ಗಂಗಾ ಮಾತೆ ಎಂದು ಪೂಜಿಸುತ್ತೇವೆ ಭೂಮಿಯ ಮೇಲೆ ಶೇಕಡ 71ರಷ್ಟು ಭಾಗ ನೀರಿದೆ ಎಂದು ಹೇಳುತ್ತಾರೆ…. ಆದರೆ ಈ ಎಲ್ಲಾ ನೀರು ಕುಡಿಯಲು ಯೋಗ್ಯವಲ್ಲ. ನೀರು ಜೀವದಾಯಿನಿ. ಈ ಪೃಥ್ವಿಯ ಮೇಲೆ ನೀರು ಎಲ್ಲೆಡೆ ಇದೆ. ಭೂಮಿಯ ಕೆಳಭಾಗದಲ್ಲಿ ಅಂತರ್ಜಲವಾಗಿ ಆಕಾಶದಲ್ಲಿ ಮೇಘ ರೂಪದಲ್ಲಿ ನೀರಿದೆ. ಸೃಷ್ಟಿಯಲ್ಲಿ ಆವಿಯ ರೂಪದಲ್ಲಿಯೂ ನೀರಿದೆ.
ಬದಲಾದ ಕಾಲಘಟ್ಟದಲ್ಲಿ ನೀರಿನ ಬಳಕೆ ತುಸು ಹೆಚ್ಚೇ ಆಗಿದ್ದು ನಾವು ಹರಿಯುವ ನಲ್ಲಿಯ ಕೆಳಗೆ ಮುಖ ತೊಳೆದುಕೊಳ್ಳುವುದಕ್ಕಿಂತ ತಂಬಿಗೆಯಲ್ಲಿ ಮುಖ ತೊಳೆದುಕೊಳ್ಳುವುದು ಒಳ್ಳೆಯದು. ನೀರು ಅದೆಷ್ಟು ಪ್ರಮಾಣದಲ್ಲಿ ಹರಿಯುತ್ತದೆ ಎಂಬುದು ನಮಗೆ ಗೊತ್ತಾಗುವುದಿಲ್ಲ ಆದರೆ ಅವಶ್ಯಕತೆಗಿಂತ ಹೆಚ್ಚು ನೀರು ಹರಿಯುತ್ತದೆ ಎಂದು ಮಾತ್ರ ಅರಿಯಬಲ್ಲೆವು.
ಈ ಹಿಂದೆ ಬಾವಿಯಲ್ಲಿ ನೀರನ್ನು ಸೇದಿ ತರಬೇಕಾಗುತ್ತಿತ್ತು. ಪಾತ್ರೆಗಳನ್ನು ಒಂದು ಬುಟ್ಟಿಯಲ್ಲಿ ಇಟ್ಟುಕೊಂಡು, ಒಗೆಯುವ ಬಟ್ಟೆಯನ್ನು ಗಂಟು ಕಟ್ಟಿಕೊಂಡು ಕೆರೆ ಹೊಳೆ ಹಳ್ಳಗಳಿಗೆ ಒಯ್ದು ಸ್ವಚ್ಚಗೊಳಿಸಿ ತರಲಾಗುತ್ತಿತ್ತು. ಬಹುತೇಕ ಗಂಡಸರು ಸ್ನಾನಕ್ಕೆ ಮನೆಯ ಹತ್ತಿರದ ಬಾವಿ ಹಳ್ಳಗಳನ್ನು ಅವಲಂಬಿಸಿದರೆ ಹೆಣ್ಣು ಮಕ್ಕಳು ಮಧ್ಯಾಹ್ನದ ಹೊತ್ತಿಗೆ ಪಾತ್ರೆ ಬಟ್ಟೆಯೊಂದಿಗೆ ಹೊಳೆಗೆ ನಡೆಯುತ್ತಿದ್ದರು. ಪಾತ್ರೆಗಳನ್ನು ತಿಕ್ಕಿ ತೊಳೆದು ಬಟ್ಟೆಗಳನ್ನು ಒಗೆದು ಹರವಿ ತಾವು ಕೂಡ ಸ್ನಾನ ಮಾಡಿ ಆ ಬಟ್ಟೆಗಳನ್ನು ಹಿಂಡಿ ಹರವಿ ತುಸು ಹರಟೆ ಹೊಡೆದು ಒಣಗಿದ ಬಟ್ಟೆಗಳನ್ನು ಮಡಚಿ ಗಂಟು ಕಟ್ಟಿಕೊಂಡು ಮನೆಗೆ ಬರುತ್ತಿದ್ದರು.
ಸಿಹಿ ನೀರಿನ ಬಾವಿಯಿಂದ ಕುಡಿಯುವ ನೀರು ಹೊತ್ತು ತರುತ್ತಿದ್ದ ಅವರು ಅವಶ್ಯಕತೆ ಇದ್ದಷ್ಟೇ ನೀರನ್ನು ಬಳಸುತ್ತಿದ್ದರು.

ಪ್ರಸ್ತುತ ದಿನಮಾನಗಳಲ್ಲಿ ಬಟನ್ ಹಾಕಿದರೆ ಮನೆಯ ಅಂಡರ್ ಗ್ರೌಂಡ್ನಲ್ಲಿ ಶೇಖರಿಸಿ ಇಟ್ಟಿರುವ ನೀರು ಮನೆಯ ಮೇಲ್ಭಾಗದ ನೀರಿನ ತೊಟ್ಟಿಗೆ ತಲುಪುತ್ತದೆ. ನಲ್ಲಿಯನ್ನು ತಿರುಗಿಸಿಟ್ಟರೆ ನೀರು ಒಂದೇ ಸಮ ಹರಿಯ ತೊಡಗುತ್ತದೆ ಅದೆಷ್ಟು ಬಳಸಿದ್ದೇವೆ ಎಂದು ಗೊತ್ತಾಗದೆ ನೀರನ್ನು ಬಳಸುವ ಜನರು ನಮ್ಮಲ್ಲಿದ್ದಾರೆ. ಟಾಯ್ಲೆಟ್ ನ ಫಸ್ಟ್ ಟ್ಯಾಂಕ್ ಮತ್ತು ವಾಷಿಂಗ್ ಮಷೀನ್ಗಳಿಗೆ ತುಸು ಹೆಜ್ಜೆ ನೀರು ಬೇಕಾಗುತ್ತದೆ. ಇನ್ನು ದೊಡ್ಡ ದೊಡ್ಡ ನಗರಗಳಲ್ಲಿ ಇರುವ ಅಪಾರ್ಟ್ಮೆಂಟ್ ಗಳಲ್ಲಿ ಪೂರ್ಣ ದೊಡ್ಡದಾದ ನೀರಿನ ಟ್ಯಾಂಕ್ಗಳಲ್ಲಿ ನೀರು ಶೇಖರಸಲ್ಪಟ್ಟಿದ್ದು ಯಾರಿಗೂ ಇಷ್ಟೆ ಬಳಸಬೇಕು ಎಂಬ ನಿಯಮಗಳು ಇಲ್ಲದೆ ಇರುವುದರಿಂದ ಅಲ್ಲಿ ಕೂಡ ನೀರಿನ ದುರ್ಬಳಕೆಯಾಗುತ್ತದೆ. ಶವರ್ ಗಳಲ್ಲಿ ಸ್ನಾನ ಮಾಡುವ ಜನರು ಕೂಡ ನೀರನ್ನು ಅತಿಯಾಗಿ ಬಳಸುತ್ತಾರೆ. ಕೆಲವೆಡೆ ಕುಡಿಯಲು ನೀರಿಲ್ಲದೇ ಇದ್ದರೂ ಕಾರುಗಳನ್ನು, ಬೈಕುಗಳನ್ನು ತೊಳೆಯಲು ಪೈಪ್ ಮೂಲಕ ನೀರನ್ನು ಹಾಯಿಸುತ್ತಾರೆ ಇಲ್ಲಿಯೂ ಕೂಡ ಉಗುರಿಗೆ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಂತೆ ನೀರಿನ ಪೋಲಾಗುವುದು.
ಅರಣ್ಯಗಳ ಒತ್ತುವರಿ, ಕಾಡನ್ನು ಕಡಿದು ಕಾಂಕ್ರೀಟ್ ನಾಡನ್ನಾಗಿ ಮಾಡುತ್ತಿರುವುದು, ಅವೈಜ್ಞಾನಿಕವಾಗಿ ರಸ್ತೆಗಳನ್ನು ಅಗಲೀಕರಣ ಮಾಡುವಾಗ ಗಿಡಮರಗಳನ್ನು ಬೇಕಾಬಿಟ್ಟಿಯಾಗಿ ತರಿದು ಚೆಲ್ಲುತ್ತಿರುವುದು, ನೀರು ಹರಿದು ಹೋಗಲು ಅನುವಾಗುವಂತೆ ಮಾಡದೆ ನೆಲಕ್ಕೆಲ್ಲ ಸಿಮೆಂಟಿನ ನೆಲಹಾಸನ್ನು ಹಾಸಿ ನೀರನ್ನು ಇಂಗಿಸದೆ ಇರುವುದು.. ಹೀಗೆ ಹತ್ತು ಹಲವು ರೀತಿಗಳಲ್ಲಿ ನೀರಿನ ದುರ್ಬಳಕೆಯಾಗುತ್ತಿದ್ದು ಇವೆಲ್ಲದರ ಪರಿಣಾಮವಾಗಿ ಅಂತರ್ಜಲ ಮಟ್ಟ ಕುಸಿದಿದೆ. ಬೇಸಿಗೆಯಿನ್ನೂ ದೂರ ಮಳೆಗಾಲ ಮುಗಿಯುವುದರಲ್ಲಿ ಕೆರೆಕಟ್ಟೆಗಳು ಕೂಡ ಬರಿದಾಗುತ್ತಿವೆ. ಗಿಡಮರಗಳ ಸಾಂದ್ರತೆ ಕಡಿಮೆಯಾಗಿರುವುದರಿಂದ ಮಳೆಯ ಪ್ರಮಾಣ ಕೂಡ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಭೂಮಿಯ ತಾಪಮಾನ ಹೆಚ್ಚುತ್ತಿದ್ದು ಇದು ಹೀಗೆಯೇ ಮುಂದುವರೆದರೆ ಮುಂದಿನ ಕೆಲವೇ ವರ್ಷಗಳಲ್ಲಿ

ಭೂಮಿಯ ಮೇಲೆ ಮನುಷ್ಯ ಬದುಕುವುದು ದುರ್ಬರ ಎನಿಸುವಷ್ಟು ಉಷ್ಣತೆ ನಮ್ಮನ್ನು ಕಾಡುತ್ತದೆ. ಈಗಾಗಲೇ ಹಲವಾರು ಸಸ್ಯ ಪ್ರಭೇದಗಳು ಪ್ರಾಣಿ ಸಂಕುಲಗಳು ನಾಶವಾಗಿದ್ದು ಮತ್ತೆ ಕೆಲವು ವಿನಾಶದ ಅಂಚಿನಲ್ಲಿವೆ.
ಇದೆಲ್ಲವನ್ನು ಮನಗಂಡು ನಾವು ನಮ್ಮ ಮುಂದಿನ ಪೀಳಿಗೆಯ ಉಳಿವಿಗಾಗಿ ಜಲ ಸಂರಕ್ಷಣೆಯನ್ನು ಮಾಡಲೇಬೇಕಾಗಿದೆ. ನೀರಿನ ದುರುಪಯೋಗದ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು. ಎಲ್ಲೆಲ್ಲಿ ನಾವು ನೀರಿನ ದುರ್ಬಳಕೆಯನ್ನು ತಪ್ಪಿಸಬಹುದು ಎಂಬುದನ್ನು ಅರಿತು ಅಂತೆಯೇ ಕಾರ್ಯನಿರ್ವಹಿಸಲು ಮಕ್ಕಳನ್ನು ಸೇರಿದಂತೆ ನಾವು ಕೂಡ ಯುದ್ದೋಪಾದಿಯಲ್ಲಿ ಜಲ ಮೂಲಗಳನ್ನು ಸಂರಕ್ಷಿಸಬೇಕು. ನಮ್ಮ ಮುಂದಿನ ಜನಾಂಗದ ಉಳಿವಿಗಾಗಿ ನೀರನ್ನು ಸಂರಕ್ಷಿಸುವುದು ನಮ್ಮ ಆಧ್ಯ ಕರ್ತವ್ಯ ಎಂಬುದನ್ನು ಅರಿತು ನಾವು ಕಾರ್ಯ ನಿರ್ವಹಿಸಲೇಬೇಕು.


