ಮಣ್ಣನ್ನು ಪ್ರೀತಿಸದ ಮನಸ್ಸಿಗೆ ಅನ್ನದ ಬೆಲೆ ತಿಳಿಯದು. ರೈತನ ನೋವನ್ನು ಅರಿಯದ ಸಮಾಜಕ್ಕೆ ಕೃಷಿಯ ಮಹತ್ವ ಅರ್ಥವಾಗದು. ಭೂಮಿಯನ್ನು ತಾಯಿಯಂತೆ, ರೈತನನ್ನು ಬಂಧುವಿನಂತೆ ಕಾಣುವ ಮನಸ್ಸುಗಳು ಹೆಚ್ಚಾದಾಗಲೇ ಕೃಷಿಯ ನಿಜವಾದ ಅಭಿವೃದ್ಧಿ ಸಾಧ್ಯ. ಕೃಷಿಗೂ ಬೇಕಿದೆ ಪ್ರೀತಿಸುವ ಮನಸ್ಸು..
✍
– ಸಿದ್ಧಲಿಂಗ ಚೌಧರಿ.
ಶಿಕ್ಷಕರು
ಸಿಂದಗಿ – ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಹಳ್ಳಿಯ ಬದುಕಿನಲ್ಲಿ ಮಣ್ಣಿಗೂ ಮನುಷ್ಯನಿಗೂ ಅವಿನಾಭಾವ ಸಂಬಂಧ. ರೈತನಿಗೆ ಹೊಲವೆಂದರೆ ಕೇವಲ ಆಸ್ತಿಯಲ್ಲ, ಅದು ಅವನ ಬದುಕು, ಭರವಸೆ, ಕನಸುಗಳ ತವರು. ತಾಯಿ ಮಗುವನ್ನು ಮುದ್ದಾಗಿ ಸಾಕುವಂತೆ ರೈತನು ತನ್ನ ಹೊಲವನ್ನು ಪ್ರೀತಿಯಿಂದ ಪೋಷಿಸುತ್ತಾನೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಎಂದರೆ ಲಾಭ–ನಷ್ಟದ ಲೆಕ್ಕಾಚಾರವಾಗುತ್ತಿರುವುದು ಆತಂಕಕಾರಿ ಸಂಗತಿ.ಮುಂಗಾರು ಮಳೆ ಬಿದ್ದಾಗ ರೈತನ ಮುಖದಲ್ಲಿ ಮೂಡುವ ಮಂದಹಾಸವೇ ಬೇರೆ. ಹದವಾದ ಮಣ್ಣಿನಲ್ಲಿ ಬೀಜ ಬಿತ್ತುವಾಗ ಅವನ ಕಣ್ಣೆದುರು ನೂರಾರು ಕನಸುಗಳು ಕುಣಿಯುತ್ತವೆ. ಮಗಳ ಮದುವೆ, ಮಗನ ಓದು, ಮನೆಯ ಸಾಲ ತೀರಿಸುವ ಆಸೆ ಎಲ್ಲವೂ ಆ ಪುಟ್ಟ ಬೀಜದಲ್ಲಿಯೇ ಅಡಗಿರುತ್ತವೆ. ಆದರೆ ಮಳೆ ಕೈಕೊಟ್ಟರೆ, ಬೆಳೆ ಒಣಗಿದರೆ ಅವನ ಕನಸುಗಳೂ ಬಾಡಿಹೋಗುತ್ತವೆ.
‘ಭೂಮಿ ನಂಬಿದವನನ್ನು ಭೂತಾಯಿ ಕೈಬಿಡುವುದಿಲ್ಲ’ ಎಂಬ ನಂಬಿಕೆಯಿಂದಲೇ ರೈತ ಮತ್ತೆ ನೇಗಿಲು ಹಿಡಿಯುತ್ತಾನೆ. ಆದರೆ ಆ ಭರವಸೆಯೊಂದೇ ಅವನ ಹೊಟ್ಟೆ ತುಂಬಿಸುವುದಿಲ್ಲ. ಬೆಳೆದ ಬೆಳೆಗೆ ನ್ಯಾಯಯುತ ಬೆಲೆ, ಸಮಯಕ್ಕೆ ಸರಿಯಾದ ನೀರು, ಗುಣಮಟ್ಟದ ಬೀಜ, ಸಾಲದ ಸೌಲಭ್ಯ ಹಾಗೂ ಮಾರುಕಟ್ಟೆಯ ಭದ್ರತೆ ಬೇಕು.

ಇಂದು ಕೃಷಿಯಲ್ಲಿ ಯಂತ್ರೋಪಕರಣಗಳು ಹೆಚ್ಚಾಗಿವೆ. ಎತ್ತುಗಳ ಜಾಗದಲ್ಲಿ ಟ್ರ್ಯಾಕ್ಟರ್‌ಗಳು ಬಂದಿವೆ. ಹನಿ ನೀರಾವರಿ, ಆಧುನಿಕ ಬಿತ್ತನೆ ಪದ್ಧತಿಗಳು ಕೃಷಿಯನ್ನು ಸುಲಭಗೊಳಿಸಿವೆ. ಆದರೆ ಯಂತ್ರಗಳಿಗೆ ರೈತನ ಬೆವರಿನ ಬೆಲೆ ತಿಳಿಯುವುದಿಲ್ಲ. ತಂತ್ರಜ್ಞಾನದ ಜೊತೆಗೆ ರೈತನ ಅನುಭವಕ್ಕೂ ಗೌರವ ಸಿಗಬೇಕು.
ಮಣ್ಣಿನ ಫಲವತ್ತತೆ ಕಾಪಾಡುವುದು, ನೀರನ್ನು ಮಿತವಾಗಿ ಬಳಸುವುದು, ಸಾವಯವ ಗೊಬ್ಬರಕ್ಕೆ ಆದ್ಯತೆ ನೀಡುವುದು ಹಾಗೂ ಪರಿಸರ ಸ್ನೇಹಿ ಕೃಷಿಯನ್ನು ಬೆಳೆಸುವುದು ಇಂದಿನ ಅಗತ್ಯ. ಭೂಮಿಯಿಂದ ನಿರಂತರವಾಗಿ ಪಡೆಯುವುದಷ್ಟೇ ಅಲ್ಲ, ಭೂಮಿಗೆ ಮರಳಿ ಕೊಡುವ ಮನಸ್ಸೂ ನಮ್ಮದಾಗಬೇಕು.

ಹಳ್ಳಿಯ ಯುವಕರು ಕೃಷಿಯಿಂದ ವಿಮುಖರಾಗುತ್ತಿರುವುದು ಮತ್ತೊಂದು ಸವಾಲು. ಕೃಷಿ ಎಂದರೆ ಕೇವಲ ಕೆಸರು ಮೆತ್ತಿಕೊಳ್ಳುವ ಕೆಲಸವಲ್ಲ; ಅದು ಜ್ಞಾನ, ವಿಜ್ಞಾನ ಮತ್ತು ಪರಿಶ್ರಮದ ಸಂಗಮ. ಯುವಕರಿಗೆ ಕೃಷಿಯಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಿದರೆ ಹಳ್ಳಿಗಳ ಬದುಕಿಗೂ ಹೊಸ ಚೈತನ್ಯ ಬರಬಹುದು.
ರೈತ ಬೆಳೆದಾಗ ಮಾತ್ರ ದೇಶ ಬೆಳೆಯುತ್ತದೆ. ಅವನ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಸಮಾಜವೂ ಅವನ ಬೆವರಿನ ಅನ್ನಕ್ಕೆ ಗೌರವ ನೀಡಬೇಕು. ರೈತನಿಗೆ ಕೇವಲ ಸಹಾನುಭೂತಿ ತೋರಿಸಿದರೆ ಸಾಲದು, ಅವನ ಬದುಕಿಗೆ ಆರ್ಥಿಕ ಭದ್ರತೆಯನ್ನೂ ಒದಗಿಸಬೇಕು.
ಕೊನೆಯದಾಗಿ, ಮಣ್ಣನ್ನು ಪ್ರೀತಿಸದ ಮನಸ್ಸಿಗೆ ಅನ್ನದ ಬೆಲೆ ತಿಳಿಯದು. ರೈತನ ನೋವನ್ನು ಅರಿಯದ ಸಮಾಜಕ್ಕೆ ಕೃಷಿಯ ಮಹತ್ವ ಅರ್ಥವಾಗದು. ಭೂಮಿಯನ್ನು ತಾಯಿಯಂತೆ, ರೈತನನ್ನು ಬಂಧುವಿನಂತೆ ಕಾಣುವ ಮನಸ್ಸುಗಳು ಹೆಚ್ಚಾದಾಗಲೇ ಕೃಷಿಯ ನಿಜವಾದ ಅಭಿವೃದ್ಧಿ ಸಾಧ್ಯ.
ಮಣ್ಣಿಗೆ ಬೆವರು ಸುರಿದರೆ ಬೆಳೆ ಬರುತ್ತದೆ; ಮಣ್ಣಿಗೆ ಪ್ರೀತಿ ಸುರಿದರೆ ಬದುಕು ಹಸನಾಗುತ್ತದೆ.


