ಶಾಸಕ ಬಸನಗೌಡ ಪಾಟೀಲ ಯತ್ನಾಳರ ಶಿಫಾರಸ್ಸು ಮೇರೆಗೆ ಆದೇಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಶಿಫಾರಸ್ಸಿನ ಮೇರೆಗೆ ಮೈಸೂರು-ಬಾಗಲಕೋಟ ಬಸವಾ ಎಕ್ಸಪ್ರೆಸ್ ಮತ್ತು ಮೈಸೂರು-ಫಂಡರಾಪುರ ಗೋಲಗುಂಬಜ್ ಎಕ್ಸಪ್ರೆಸ್ ರೈಲುಗಳನ್ನು ಲಚ್ಯಾಣ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಅನುಮೋದನೆ ನೀಡಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸೋಮವಣ್ಣ ಅವರು ಆದೇಶ ಹೊರಡಿಸಿದ್ದಾರೆ.
ಸಿದ್ಧಲಿಂಗ ಮಹಾರಾಜರ ಪವಿತ್ರ ಸ್ಥಳವಾದ ಲಚ್ಯಾಣ ಗ್ರಾಮದ ಸುತ್ತಮುತ್ತಲಿನ ಅನೇಕ ಹಳ್ಳಿಗಳಿಗೆ ಕೇಂದ್ರ ಸ್ಥಳವಾಗಿದ್ದು, ಪ್ರತಿ ದಿನ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು, ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವ್ಯಾಪಾರಿಗಳು ಭೇಟಿ ನೀಡುತ್ತಾರೆ. ಇವರ ಪ್ರಯಾಣಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಅಲ್ಲಿನ ಗ್ರಾಮಸ್ಥರು ಚಡಚಣ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡಿಸಲು ಮನವಿ ಮಾಡಿದ್ದರು.
ಈ ಕುರಿತಂತೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರು ಪತ್ರ ಬರೆದಿದ್ದರು. ಅದಕ್ಕೆ ಸ್ಪಂದಿಸಿ, ರೈಲ್ವೆ ನಂ.17307/17308 ಮೈಸೂರು-ಬಾಗಲಕೋಟ ಬಸವಾ ಎಕ್ಸಪ್ರೆಸ್ ಹಾಗೂ ರೈಲ್ವೆ ನಂ. 16535/16536 ಮೈಸೂರು-ಫಂಡರಾಪುರ ರೈಲುಗಳು ಲಚ್ಯಾಣ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಅನುಮತಿ ನೀಡಿ, ಆದೇಶಿಸಿರುವ ಕುರಿತಂತೆ ಶಾಸಕರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ನಗರ ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

