ಅನೇಕ ಶರಣರು ಅಪ್ಪು ತೇಜ ಸ್ರಷ್ಟಿ ವಾಯು ಅಗ್ನಿ ಹೀಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಆರೋಗ್ಯ ಭೂ ಗಣಿ, ಸಸ್ಯ ಕಾಲಜ್ಞಾನ ಹೀಗೆ ವಿಜ್ಞಾನದ ಎಲ್ಲ ಮಗ್ಗಲುಗಳನ್ನು ಶರಣರು ತಮ್ಮ ವಚನಗಳಲ್ಲಿ ಪ್ರಸ್ತಾವನೆ ಮಾಡಿದ್ದಾರೆ. Vachana saahitya seems to be more scientific like science itself. ಇಂತಹ ಅಪೂರ್ವವಾದ ಆಸ್ತಿಯನ್ನು ನಾವು ಜಗತ್ತಿಗೆ ಪರಿಚಯಿಸುವ ಪ್ರಾಮಾಣಿಕ ಕೆಲಸವನ್ನು ಮಾಡಬೇಕಿದೆ.
ಲೇಖನ
-ಡಾ. ಶಶಿಕಾಂತ ಆರ್ ಪಟ್ಟಣ.
ರಾಮದುರ್ಗ – ಪೂನಾ
ಉದಯರಶ್ಮಿ ದಿನಪತ್ರಿಕೆ
ಭಾರತ ಭೂ ಖಂಡದಲ್ಲಿ ೧೨ ನೆ ಶತಮಾನದ ಶರಣ ಕ್ರಾಂತಿ ಜಗವು ಕಂಡ ಶ್ರೇಷ್ಠ ಕ್ರಾಂತಿ, ಕರ್ನಾಟಕವು ಕಂಡ ಅಧ್ಭುತ ಸಾಮಾಜಿಕ ಚಳುವಳಿ. ಶತಮಾನದಿಂದ ಶೋಷಣೆಗೆ ಒಳಗಾಗಿ ಸೊಲ್ಲೆತ್ತದೆ ಬದುಕಿದ ದೀನ ದಲಿತರು ಶೋಷಿತರು ಒಟ್ಟಾರೆ ಬಸವ ಶಕ್ತಿಯ ನೇತ್ರತ್ವದಲ್ಲಿ ಕೈಗೊಂಡ ಬಹು ದೊಡ್ಡ ಹೋರಾಟದ ಫಲವೇ ವಚನ ಶಾಸ್ತ್ರದ ನಿರ್ಮಾಣ. ವಚನ ಶಾಸ್ತ್ರವು ಜಗತ್ತಿನ ಮೊಟ್ಟ ಮೊದಲೆನೆಯ ದೇಸಿ ಸಾಹಿತ್ಯದ ಉಗಮ. ಇಲ್ಲಿ ಸಮಾಜದ ಎಲ್ಲಾ ವರ್ಗದ ಕೆಳಸ್ತರದ ಬಡವರ, ನೊಂದವರ ಪರವಾಗಿ ಯಾವುದೇ ಪೂರ್ವ ಭಾವಿ ತಯಾರಿ ಇಲ್ಲದೆ ಸಮುದಾಯ ಒಳಿತಿಗೆ ಹುಟ್ಟಿಕೊಂಡ ಬಂಡಾಯ ಸಾಹಿತ್ಯ. ಪ್ರವಾಹದ ವಿರುದ್ಧ ಈಜುವ ಪ್ರಾಯಾಸದ ಕೆಲಸ. ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಪ್ರತಿಭಟನೆಯ ಧ್ವನಿ ಹೊತ್ತು ಹೊಮ್ಮಿದ ಸಾಹಿತ್ಯ ವಚನ ಸಾಹಿತ್ಯ, ನುಡಿಗೆ ಪೂರಕವಾದ ನಡೆ ರೂಪಿಸುವ, ವ್ಯಕ್ತಿಯ ವಿಕಾಸವೇ ವಚನದ ಗುರಿ.ವಚನಗಳು ಪ್ರಜಾಸತ್ತಾತ್ಮಕ ಪಾರದರ್ಶಕ ಜನಪರ ಹೋರಾಟದ ಪ್ರತೀಕ. ವಚನಗಳು ಪ್ರತಿಜ್ಞೆ ಮತ್ತು ನುಡಿದಂತೆ ನಡೆಯುವ ಸತ್ಯದ ಹಾದಿ.
ವಚನಗಳು ಆತ್ಮ ಸಾಕ್ಷಿಯಾಗಿ ಪ್ರಮಾಣಮಾಡಿದ ಸತ್ಯ ಶೋಧನೆಯ ಅಸ್ತ್ರಗಳು. ಶರಣರಿಗೆ ಅಧ್ಯಾತ್ಮ, ಸಾಮಾಜಿಕ ಸ್ಪಂದನೆ, ಪರಿವರ್ತನೆಯ ಗುರಿಗಳಾಗಿದ್ದರೂ ಅಂತಹ ಅಭಿವ್ಯಕ್ತಿ ಮಾಧ್ಯಮದ ಮೂಲಕ ವಿಜ್ಞಾನದ ಅನ್ವೇಷಣೆಯನ್ನು ಶರಣರು ತೆರೆದಿಟ್ಟಿದ್ದಾರೆ. ವಿಜ್ಞಾನ ಯುಗವನ್ನು ೧೫ ನೆ ಶತಮಾನದ ಬಳುವಳಿ ಎಂದು ಹೇಳುವುದು ಸಹಜ. ಕೈಗಾರಿಕಾ ಕ್ರಾಂತಿ, ಯುರೋಪ ರಾಷ್ಟ್ರಗಳ ವಿಜ್ನಾನನದ ಆವಿಷ್ಕಾರಗಳ ಭರಾಟೆಯಿಂದಾಗಿ ಹೊಸ ಹೊಸ ಯಂತ್ರ ತಂತ್ರಗಳು ಜಗತ್ತಿಗೆ ಪರಿಚಯವಾದವು.
ಬಸವಾದಿ ಶರಣರು ಜಗತ್ತಿನ ಆಗು ಹೋಗುಗಳ ಬಗ್ಗೆ ಕಾಲ ಜ್ಞಾನ, ಆಕಾಶಕಾಯ, ಸಸ್ಯ ಸಂಪತ್ತು, ಅನುವಂಶ, ಹುಟ್ಟು, ಆರೋಗ್ಯ ವಿಜ್ನಾನ. ಸ್ರಷ್ಟಿ, ಅಣು ರಚನೆ ಅಣು ಸಂಯೋಜನೆ, ಶಕ್ತಿ ಸಂಚಯ ಮುಂತಾದ ಅನೇಕ ವಿಷಯಗಳನ್ನು ತಮ್ಮ ವಚನಗಳಲ್ಲಿ ಅನಾವರಣಗೊಳಿಸಿದ್ದಾರೆ. ಮೇಲ್ನೋಟಕ್ಕೆ ಬೆಡಗಿನ ಸಾಮಾನ್ಯ ಪ್ರತಿಮೆಗಳ ಮೂಲಕ ವಿಜ್ನಾನದ ವಿಷಯ ಪ್ರಸ್ತಾಪ ಮಾಡಿದ ಶರಣರ ವಚನ ನಿರ್ವಚನ ಮಾಡಿದಾಗ ಆಗುವ ಆನಂದ ಶರಣರ ಆಶಯಗಳ ಪರಿಚಯವಾಗುತ್ತದೆ.
ಉದಕದೊಳಗೆ ಕಿಚ್ಚು ಹುಟ್ಟಿ ಸುಡುತಿರ್ದುದು ಕಂಡೆ
ಗಗನ ಮೇಲೆ ಮಾಮರವ ಕಂಡೆ
ಪಕ್ಕವಿಲ್ಲದ ಹಕ್ಕಿ ಬಯಲ ನುಂಗಿತ್ತ ಕಂಡೆ ಗುಹೇಶ್ವರ .(ಸ ವ ಸ೦ -೨೯೨ ಆವೃತ್ತಿ ೨ ಪುಟ ೮೫ .)

ಇದು ಮಹಾಜ್ಞಾನಿ ಅಲ್ಲಮ ಪ್ರಭುಗಳ ವಚನ, ಬಯಲಿನ ಎಲ್ಲ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಜೀವ ಕಳೆ ಮತ್ತು ಬಾಹ್ಯ ಪ್ರಪಂಚದ ಸ೦ಬ೦ದಗಳು ಅವುಗಳ ವಿಕಾಸ ಬೆಳವಣಿಗೆ, ಪ್ರಪಂಚದಲ್ಲಿ ಅಡಗಿರುವ ಅನೇಕ ಸತ್ಯಗಳನ್ನು ಅನಾವರಣ ಮಾಡಿದ್ದಾರೆ ಅಲ್ಲಮರು.
ಪ್ರಸ್ತುತ ವಚನದಲ್ಲಿ ನೀರಿನಲ್ಲಿ ಬೆಂಕಿಯ ಕಿಚ್ಚು ಹುಟ್ಟುತ್ತದೆ ಎಂದು ತಮ್ಮ ಕಾಲಜ್ಞಾನದ ಅನುಭಾವ ಹೇಳಿದರು, ಕೆಲ ಶತಮಾನದ ನಂತರ ಗೊತ್ತಾಯಿತು ವಿದ್ಯುತ್ ನೀರಿನಿಂದ ಹುಟ್ಟುತದೆ ಎಂದು. ಗಗನ ಜನರಿಗೆ ನಿಲುಕದ ಕಾಯ ಎಂದು ನಂಬಿದ್ದ ಜನರಿಗೆ, ಇಲ್ಲಿ ಗಗನವು ಬಯಲು ಅಲ್ಲಿಯ ಅನೇಕ ಗ್ರಹಗಳ ಮೇಲೆ ಜೈವಿಕ ವಿಕಾಸದ ಸಾಧ್ಯತೆ ಇದೆ.ಎಂದು ನಾಸಾ ವಿಜ್ಞಾನಿಗಳು ಅಭಿಪ್ರಾಯ ಮತ್ತು ಅಭಿಮತಕ್ಕೆ ಬಂದಿದ್ದಾರೆ. ಗಗನದಲ್ಲಿ ಮಾಮರವನ್ನು ನೋಡುವ ಕಾಲ ದೂರ ಉಳಿದಿಲ್ಲ. ಇತ್ತೀಚಿಗೆ ನಾಸಾ ವಿಜ್ಞಾನಿಗಳು ಮಾವಿನ ಮರವನ್ನು ಬೇರೆ ಗ್ರಹದಲ್ಲಿ ನೆಡುವ ಪ್ರಯತ್ನದಲ್ಲಿದ್ದಾರೆ. ಅದೇ ರೀತಿ ಪಕ್ಕವಿಲ್ಲದ ಹಕ್ಕಿ, ಅಂದರೆ ಮನುಷ್ಯನ ಆತ್ಮ, ಆತ್ಮವೆಂಬ ಪಕ್ಷಿಗೆ ರೆಕ್ಕೆಯಿಲ್ಲ ಪಕ್ಕವಿಲ್ಲಾ, ಆದರೆ ದುರಾತ್ಮನ ವಿಚಾರದಿಂದ ಅಮೆರಿಕೆಯ ವಿಶ್ವ ವಾಣಿಜ್ಯ ಕಟ್ಟಡ ಕೆಡುವಬಲ್ಲದು. ಅಣು ವಿಕಿರಣ ಸಂಶೋದನೆ, ಯುದ್ಧಕಾಂಡ, ಕ್ಷಿಪಣಿಗಳು, ಬಾಂಬು ಇಂತಹ ಸ್ಪೋಟದಿಂದ ನಾಗಸಾಕಿ ಮತ್ತು ಹಿರೋಷಿಮಾ ೧೯೪೫ ರಲ್ಲಿ ನಲುಗಿ ಸುಟ್ಟು ಕರಕಲು ಆದಂತೆ, ಇಡಿ ಭೂಮಿಯೇ ಸುಟ್ಟು ಹೋಗಬಹುದೆಂಬ ಆತಂಕವನ್ನು ಅಲ್ಲಮರು ವ್ಯಕ್ತ ಪಡಿಸಿದ್ದಾರೆ. ಇಂತಹ ಪ್ರಯತ್ನವನ್ನ ಒಸಾಮ ಬಿನ್ ಲಾಡೆನ್, ಹಿಟ್ಲರ್, ಮುಸುಲೋನಿ ಮುಂತಾದ ಅಧಿಕಾರಪ್ರಿಯ ರಕ್ತ ಪಿಪಾಸಿಗಳು ಬಯಸುತ್ತಾರೆ.

ಇಂದು ಎಲ್ಲಾ ರಾಷ್ಟ್ರಗಳು ಅಣ್ವಸ್ತ್ರಗಳನ್ನು ಕ್ಷಿಪಣಿಗಳನ್ನು ತಯಾರಿಸುತ್ತಿವೆ, ಈ ವಿಜ್ಞಾನಿ ಎಂಬ ಪಕ್ಷಿಗಳು ಒಮ್ಮೆ ಈ ಭೂಮಿಯನ್ನು ನುಂಗಬಹುದು, ಇದಕ್ಕೆ ಬಸವ ಭಕ್ತರಾದ ನಾವು ಕೊನೆ ಹೇಳೋಣ.
ನೀರಿನಲ್ಲಿ ಬೆಂಕಿ ಅನ್ವೇಷಣೆ ಅನಿವಾರ್ಯ ಅಗತ್ಯ. ಗಗನದಲ್ಲಿ ಮಾಮರ ನೆಡುವುದು ಬೆಳವಣಿಗೆ. ಆದರೆ ದುರಾತ್ಮ ಪಕ್ಷಿಯು ಭೂವಿಯ ಬಯಲ ನುಂಗುವುದು ಆತಂಕದ ವಿಷಯ. ಇಂತಹ ಕಾಲಜ್ಞಾನವನ್ನು ಶರಣರು ಸೂಚಿಸಿದ್ದಾರೆ.
ಮನುಷ್ಯನ ಮನೋವಿಜ್ಞಾನಕ್ಕೆ ಸಂಬಂದಿಸಿದಂತೆ ಹರಿದಾಡುವ ಮನುಷ್ಯನ ಚಂಚಲತೆಯನ್ನು ಒಂದು ಕಡೆಗೆ ನಿಲ್ಲಿಸುವ ಪ್ರಯತ್ನ ಶರಣರದಾಗಿದೆ
ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ
ಮನವು ನಿಂದಲ್ಲಿ ನಿಲಲೀಯದೆನ್ನ ಮನವು
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ ನಿಮ್ಮ ಚರಣ ಕಮಲದಲ್ಲಿ
ಭ್ರಮರನಾಗಿರಿಸು ನಿಮ್ಮ ಧರ್ಮ.ಚಂಚಲತೆ ಮನುಷ್ಯನ ಏಕಾಗ್ರತೆಯನ್ನು ಕಾಡುತ್ತದೆ, ಅಷ್ಟಮದಗಳ ಆಶೆ ಆಮಿಷ ಬಯಕೆಗಳು ಮನುಷ್ಯನನ್ನು ತುಂಬಾ ಸಂಕುಚಿತನನ್ನಾಗಿ ಮಾಡುತ್ತವೆ. ದುಂಬಿ ಪರಿಮಳಕ್ಕಾಗಿ ಹೂವನ್ನು ಆರಿಸುವಂತೆ ಸಮಾಜದ ಪರಿಮಳದ ಆಕರ್ಷಣೆ ಬಸವಣ್ಣನವರ ಆಶಯವಾಗಿದೆ. ಇದು ಎಲ್ಲಾ ಶರಣರ ಕಲ್ಪನೆಯೂ ಕೂಡ.
ನೀನೊಲಿದಡೆ ಕೊರಡು ಕೊನರುವುದಯ್ಯಾ
ನೀನೊಲಿದಡೆ ಬರಡು ಹಯನಹುದಯ್ಯಾ
ನೀನೊಲಿದಡೆ ವಿಷವೆಲ್ಲ ಅಮೃತಹುದಯ್ಯ
ನೀನೊಲಿದಡೆ ಸಕಲ ಪಡಿ ಪದಾರ್ಥ
ಇದರಲ್ಲಿರ್ಪ್ಪುವು ಕೂಡಲ ಸಂಗಮದೇವ . ಬಸವಣ್ಣನವರು -ಸ .ವ ಸ೦ -೬೬ ಪುಟ ೧೯
ಕಟ್ಟಿಗೆಯ ಕೊರಡು ಉರುವಲವನ್ನಾಗಿ ಮಾತ್ರ ಬಳಸಬಹುದು ಕೊರಡಿನಲ್ಲಿ ಜೀವ ಕೋಶಗಳು ನಿರ್ಜೀವವಾಗುತ್ತವೆ. ಆದರೆ ಇಂದಿನ ಜೈವಿಕ ತಂತ್ರಜ್ಞಾನದಲ್ಲಿ ಕೊರಡನ್ನು ಬಳಸಿ ಸಸ್ಯ ಬೆಳೆಸುವ ವಿಧಾನ (Tissue Culture ) ಕಾಣುತ್ತೇವೆ. ಮನುಷ್ಯನ ನಿರಂತರ ಸಾಧನೆಯಿಂದ ಬರಡಾದ ದನ ಕರಗಳು ಕೃತ್ರಿಮ ಗರ್ಭಧಾರಣೆಯಿಂದ ಮತ್ತೆ ಹಯನ ನೀಡುತ್ತವೆ. ಒಂದು ಕಾಲದಲ್ಲಿ ಸಿಲಿಕಾನ್ ವಿಷವಾಗಿತ್ತು ಇಂದು ಕಂಪ್ಯೂಟರ್ ಸಾಫ್ಟ್ವೇರ್ ಗಳಲ್ಲಿ ಸಿಲಿಕಾನ್ ಅಗತ್ಯವಸ್ತು. ಮುಂದುವರೆದ ರಾಷ್ಟ್ರಗಳ ಅಮೃತವೇ ಸಿಲಿಕಾನ್. ದೇವನ ಒಲುಮೆ ಇದ್ದರೆ ಪಡಿಗಳು ಸಂಸ್ಕಾರವಿಲ್ಲದ ಘನ ವಸ್ತುಗಳು ಸಿದ್ಧವಸ್ತು ಆಗಿ ನಿರ್ಮಾಣವಾಗುವದರಲ್ಲಿ
ಸಂಶಯವಿಲ್ಲ ಎಂದು ನೀವೆದಿಸಿಕೊಂಡಿದ್ದಾರೆ.
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ
ಕರಣಂಗಳ ಚೇಷ್ಟೆಗೆ ಮನ ಬೀಜ
ಎನಗುಳ್ಳದೊಂದು ಮನ
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ
ಎನಗೆ ಭವವುಂಟೆ ಚೆನ್ನ ಮಲ್ಲಿಕಾರ್ಜುನಯ್ಯಾ
ಅಕ್ಕ ಮಹಾದೇವಿಯ ಈ ವಚನದಲ್ಲಿ ಜಗತ್ತಿನ ವ್ಯವಹಾರಗಳು ಕೆಲಸಗಳಿಗೆ ಸೂರ್ಯನೇ ಬೀಜವಾಗುತ್ತಾನೆ. ಮತ್ತು ಶರೀರದ ಕ್ರಿಯೆಗೆ ಇಂದ್ರಿಯ ಚಟುವಟಿಕೆಗಳಿಗೆ ಮನವೇ ಬೀಜ ಎಂಬ ಸೂಕ್ಷ ಮತ್ತು ಅಷ್ಟೆ ಸತ್ಯವನ್ನು ಹೇಳಿದ್ದಾಳೆ.
ಅದೇ ರೀತಿ —ಈಳೆ ನಿಂಬೆ ಮಾವುಮಾದಳಕೆ ಹುಳಿ ನೀರು ಎರದವರಾಯ್ಯಾ, ಕಬ್ಬು ಬಾಳೆ ಹಲಸು ನಾರಿವಾಳಕೆ ಸಿಹಿ ನೀರೆರದವರಾಯ್ಯಾ, ಕಾಲವೇ ರಾಜಾನ್ನ ಶಾಲ್ಯನಕೆ ಒಗರದ ಉದಕವನೆರದವರಾಯ್ಯಾ, ಮುರಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ, ಪರಿಮಳದುದಕವನೆರದವರಾರಯ್ಯಾ?
ಇಂತಿ ಜಲ ಒಂದೇ ನೆಲ ಒಂದೇ ಆಕಾಶವು ಒಂದೆ, ತನ್ನ ಪರಿಹಾ ಬೇರೆ ಆಗಿಹ ಆಗೇ –ಎನ್ನುವ ವಚನದಲ್ಲಿ ಗ್ರೆಗೆರ್ ಮೆಂಡಲನ ಅನುವಂಶದ(Genetic )ಲಕ್ಷಣಗಳ ಸೂಕ್ಷ ಪರಿಚಯ ಅಕ್ಕ ಮಾಡಿದ್ದಾಳೆ.
ಅದೇ ರೀತಿ ಮುಕ್ತಾಯಕ್ಕ ತನ್ನ ಅಣ್ಣ ಅಜಗಣ್ಣ ಲಿಂಗೈಕ್ಯವಾದಾಗ- ಒಂದು ವಚನದಲ್ಲಿ ಕೂರ್ಮದ ಶಿಶುವಿನ ಸ್ನೇಹದಂತಿರಬೇಕಲ್ಲದೆ ಆರೊಢಗೆಟ್ಟೆಯೆಲ್ಲ ಅಜಗಣ್ಣಾ ಎಂದು ಕಳವಳಿಸುವಾಗ ಆಮೆಗೆ ಮೊಳೆ ಇರುವದಿಲ್ಲ ಮತ್ತು ಹಕ್ಕಿಯಂತೆ ಚುಂಚು ಇರೋದಿಲ್ಲಾ ಅದರೂ ತನ್ನ ಮರಿಯಾ ಹೊಟ್ಟೆ ತುಂಬಲಿ ಎಂದು ಸಂಕಲ್ಪಿಸುತ್ತದೆ. ಇದು ಜಾಗತಿಕ ಮಟ್ಟದ ಜೈವಿಕ ಸತ್ಯವನ್ನು ವಚನಗಳ ಮತ್ತು ಅದಕ್ಕೆ ಪೂರಕವಾದ ಪ್ರತಿಮಗಳಾಗಿ ಬಳಸಿ ಪ್ರಾಪಂಚಿಕ ಜಗತ್ತಿನಲ್ಲಿ ಪಾರಮಾರ್ಥಿಕ ಅರ್ಥವನ್ನು ಸಮೀಕರಣಗೊಳಿಸಿದ್ದಾರೆ.
ಇದೆ ರೀತಿ ಇನ್ನೋರ್ವ ವಚನಕಾರ್ತಿ ಅಕ್ಕಮ್ಮ ತನ್ನ ಒಂದು ವಚನದಲ್ಲಿ
ಬೆಳ್ಳೆ ಭಂಗಿ, ನುಗ್ಗಿ, ಉಳ್ಳೆ ಮೊದಲಾದವನೆಲ್ಲವ ಬಿಡಬೇಕು
ಬೆಳ್ಳೆಯಲ್ಲಿ ದೋಷ ಭಂಗಿ ನುಗ್ಗಿಯಲ್ಲಿ ಲಹರಿ, ಉಳ್ಳೆಯಲ್ಲಿ ದುರ್ಗುಣ
ವ್ರತ ಲಿಂಗಕ್ಕೆ ಸಲ್ಲವಾಗಿ ಈ ನಾಲ್ಕು ಬಂದ ಬಂದಲ್ಲಿ ದೋಷವುಂಟು
ಆಚಾರವೇ ಪ್ರಾನವಾದ ರಾಮೇಶ್ವರಲಿಂಗದಲ್ಲಿ
ವ್ರತಕ್ಕೆ ಅಹುದಲ್ಲ ಅಂಬುದನರಿಯಬೇಕು. ಅಕ್ಕಮ್ಮ -ಸ ವ ಸ೦ ೫ -೫೨೯ ಪುಟ ೧೬೫
ಈ ವಚನದಲ್ಲಿ ಬಳ್ಳೊಳ್ಳಿ, ಅತಿಯಾದ ಕಾರಪುಡಿ, ಭಂಗಿ ನುಗ್ಗೆಕಾಯಿ ಮತ್ತು ಈರುಳ್ಳಿ ಇಂತಹ ಪದಾರ್ಥವನ್ನು ತಿನ್ನುವದರಿಂದ ವ್ರತವಂತ ತನ್ನ ಮನೋ ನಿಗ್ರಹ ಕಡಿಮೆ ಮಾಡಿಕೊಂಡು ಇಂದ್ರಿಯ ಚಾಪಲ್ಯಕ್ಕೆ ಹಾತೊರೆಯುತ್ತಾನೆ. ಇದು ಆರೋಗ್ಯ ದ್ರಷ್ಟಿಯಿ೦ದಲೂ ಸರಿಯಾಗಿದೆ.
ಚೆನ್ನಬಸವಣ್ಣನವರ ಪ್ರತಿಪಾದಿಸಿದ ಕರಣಹಸಿಗೆ ಇಂದಿಗೂ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದೆ. ಅಲ್ಲಿ ಬ್ರೂಣಗಳ ಬೆಳವಣಿಗೆ ಕುರಿತಾಗಿ ಸ್ವಾರಸ್ಯಕರವಾಗಿ ನಿರೂಪಿಸಿದ್ದಾರೆ.
ಉದಕಕ್ಕೆ ನೆಲೆಯುಂಟೆ? ವಾಯುವಿನ್ಗೆ ಶಿರವುಂಟೆ?ಶಬ್ಧಕ್ಕೆ ಕಡೆಯುಂಟೆ? ಗುರುವಿನ ಗುರು ಜಂಗಮಕ್ಕೆ ಮತ್ತೆ ಬೇರೆ ಗುರುವುಂಟೆ ?ಈ ಶಬ್ಧವ ಕೇಳಿ ನಾನು ಬೆರಗಾದೆ ಗುಹೇಶ್ವರ -ಸ ವ ಸ೦ ೨ -೯೫೩ ಪುಟ ೨೮೭
ಇಲ್ಲಿ ನೀರಿಗೆ ಒಂದು ಸ್ಥಾಯಿಯಾದ ನೆಲೆಯಿದೆಯ ಇಲ್ಲ ಅದು ಹರಿಯುವ ದ್ರವ್ಯ, ವಾಯು ಚಲನಶೀಲ ಆದರೆ ಅದಕ್ಕೆ ಶೀರವುಂಟೆ? ಶಬ್ಧಕ್ಕೆ ಕಡೆಯುಂಟೆ ಬೇಲಿ ಯುಂಟೆ? ಎಲ್ಲಾ ನಿರಾಕರದ ಮತ್ತು ಅಷ್ಟೆ ಶಕ್ತಿಯುತವಾದ ಚಲನ ಶೀಲದ ಗತಿಯನ್ನು ಜ್ಞಾನಕ್ಕೂ ಅರಿವಿಗೆ ಹೋಲಿಕೆ ಮಾಡಿದ್ದಾರೆ.
ನೀರ ಕಂಡಲ್ಲಿ ಮುಳುಗುವರಯ್ಯಾ ಮರವ ಕಂಡಲ್ಲಿ ಸುತ್ತುವರಯ್ಯಾ ,ಬತ್ತುವ ಜಲವ ಒಣಗುವ ಮರವ ನೆಚ್ಚಿದವ್ರು ನಿಮ್ಮನೆತ್ತ ಬಲ್ಲರು ಕೂಡಲ ಸಂಗಮದೇವ
ಇಂದಿನ ಸಾಮಾಜಿಕ ಪಿಡುಗು ಅಂಧ ಶ್ರದ್ಧೆ ಮತ್ತು ಕಂದಾಚರಣೆ. ೯೦೦ ವರ್ಷಗಳ ಹಿಂದೆಯೇ ಬಸವಣ್ಣನವರು ಇಂತಹ ಮೌಡ್ಯದ ವಿರುದ್ಧ ವೈಚಾರಿಕತೆಯ ಕಹಳೆ ಕೂಗಿದ್ದಾರೆ.
ಅದೆ ರೀತಿಯಲ್ಲಿ ಬಸವಣ್ಣನವರು ಯೋಗ ವಿಜ್ಞಾನದ ಬಗ್ಗೆ ಈ ರೀತಿ ಹೇಳಿದ್ದಾರೆ.
ಪಶ್ಚಿಮ ಪದ್ಮಾಸನದಲ್ಲಿ ಕುಳಿತು,
ನಿಟ್ಟೆಲುವ ಮುರಿದು, ತುಟಿ ಮಿಡುಕದೆ ಅಟ್ಟೆಯಾಡಿತಲ್ಲ !
ಬಿಟ್ಟ ಕಣ್ಣು ಬಿಗಿದ ಹುಬ್ಬು , ಬ್ರಹ್ಮ ರಂದ್ರದಲ್ಲಿ ಕಟ್ಟೆ ಗುಡಿಯ
ಕೂಡಲ ಸಂಗಮದೇವ ಹಿಡಿವೆಡದ
ಸ ವ ಸ೦ ೧ -೮೧೫-ಪುಟ ೨೦೯
ಇಲ್ಲಿ ಯೋಗ ಶಾಸ್ತ್ರವನ್ನು ಬಸವಣ್ಣನವರು ವಿವರಿಸಿದ್ದಾರೆ. ಪಶ್ಚಿಮ ಪದ್ಮಾಸನದಲ್ಲಿ ಕುಳಿತು ಮೌನವಾಗಿ ಪಕ್ಕೆಲಬು ಹೊರಳಿಸಿ, ತುಟಿ ಮಿಡಿಕಾಡಿಸದೆ, ನೆಟ್ಟ ನೋಟದಲ್ಲಿ ಹುಬ್ಬು ಹೊರಳಿಸದೆ ಬ್ರಹ್ಮ ರಂದ್ರದಲ್ಲಿ ಕಟ್ಟೆ ಗುಡಿಯಲ್ಲಿ ಧ್ಯಾನಸ್ಥನಾದರೆ ದೈವತ್ವವನ್ನೇ ಕಾಣಬಹುದು.
ಅನೇಕ ಶರಣರು ಅಪ್ಪು ತೇಜ ಸ್ರಷ್ಟಿ ವಾಯು ಅಗ್ನಿ ಹೀಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ಆರೋಗ್ಯ ಭೂ ಗಣಿ , ಸಸ್ಯ ಕಾಲಜ್ಞಾನ ಹೀಗೆ ವಿಜ್ಞಾನದ ಎಲ್ಲ ಮಗ್ಗಲುಗಳನ್ನು ಶರಣರು ತಮ್ಮ ವಚನಗಳಲ್ಲಿ ಪ್ರಸ್ತಾವನೆ ಮಾಡಿದ್ದರೆ.
Vachana saahitya seems to be more scientific like science itself. ಇಂತಹ ಅಪೂರ್ವವಾದ ಆಸ್ತಿಯನ್ನು ನಾವು ಜಗತ್ತಿಗೆ ಪರಿಚಯಿಸುವ ಪ್ರಾಮಾಣಿಕ ಕೆಲಸವನ್ನು ಮಾಡಬೇಕಿದೆ.


