ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತೆಲಗಿ ಗ್ರಾಮದ ೧೮ನೇ ಕ್ರಾಸ್ನಿಂದ ಆಲಮಟ್ಟಿ ರಸ್ತೆಗೆ ತೆರಳುವ ಮಾರ್ಗಮಧ್ಯೆ ಜಮೀನೊಂದರ ಬಳಿ ಇರುವ ಬೃಹತ್ ಹೈಟೆನ್ಷನ್ ವಿದ್ಯುತ್ ಗೋಪುರದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಸುಮಾರು ೩೦ ರಿಂದ ೪೦ ವರ್ಷದೊಳಗಿನ ವ್ಯಕ್ತಿ ವಿದ್ಯುತ್ ಟಾವರ್ ಏರಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಘಟನೆ ನಡೆದು ಸುಮಾರು ಎರಡು-ಮೂರು ದಿನಗಳಾಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಮಂಗಳವಾರ ಘಟನಾ ಸ್ಥಳಕ್ಕೆ ಕೂಡಗಿ ಎನ್ಟಿಪಿಸಿ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನ ತಳವಾರ, ಹೆಸ್ಕಾಂ ಸಹಾಯಕ ಅಭಿಯಂತರ ಮಲ್ಲು ಗೋಡಿ, ಗೊಳಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎ.ಎ. ಮಕಾನದಾರ ಸೇರಿದಂತೆ ಕೂಡಗಿ ಎನ್ಟಿಪಿಸಿ, ಪವರ್ ಗ್ರಿಡ್ ಕಾರ್ಪೊರೇಷನ್, ಅಗ್ನಿಶಾಮಕ ದಳ ಹಾಗೂ ಕಬ್ಬು ಕಟಾವು ಗ್ಯಾಂಗ್ಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಗ್ನಿಶಾಮಕ ದಳ ಹಾಗೂ ಹೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಟಾವರ್ ಮೇಲಿದ್ದ ಶವವನ್ನು ಕೆಳಗಿಳಿಸಿದರು.
ಮೃತ ವ್ಯಕ್ತಿಯ ಗುರುತು ಪತ್ತೆಗಾಗಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಬುಧವಾರ ಸಂಜೆವರೆಗೂ ಮೃತನ ಗುರುತು ಪತ್ತೆಯಾಗಿಲ್ಲ. ಕೂಡಗಿ ಎನ್ಟಿಪಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

