ಉದಯರಶ್ಮಿ ದಿನಪತ್ರಿಕೆ
ಇಂಡಿ: ೧೮ನೇ ಶತಮಾನದ ಕರ್ನಾಟಕದ ಇತಿಹಾಸದಲ್ಲಿ ಅಪ್ರತಿಮ ಸಾಹಸ, ಶೌರ್ಯ, ದೇಶಭಕ್ತಿಯ ಸಂಕೇತವಾಗಿ ಮಿನುಗುವ ವೀರ ಮಹಿಳೆ ಒನಕೆ ಓಬವ್ವಳ ಸಾಹಸಗಾಥೆ ಇಂದಿನ ಯುವ ಪೀಳಿಗೆಗೆ ಧೈರ್ಯ ಮತ್ತು ಆತ್ಮವಿಶ್ವಾಸದ ದ್ಯೋತಕವಾಗಿದೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಬುಧವಾರ ನಗರದ ಮಿನಿ ವಿಧಾನಸೌಧದ ಸಭಾಭವನದಲ್ಲಿ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡ ಒನಕೆ ಓಬವ್ವ ಅವರ ಜಯಂತಿ ಆಚರಣೆಯಲ್ಲಿ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.
ಓಬವ್ವಳು ಸ್ವಾಮಿನಿಷ್ಠೆ, ಸಮಯ ಸ್ಪೂರ್ತಿ ಮತ್ತು ತ್ಯಾಗದ ತ್ರಿವೇಣಿ ಸಂಗಮ. ಆಯುಧಗಳಿಗಿಂತ ಆತ್ಮವಿಶ್ವಾಸ ದೊಡ್ಡದು. ಸ್ವಾವಲಂಬನೆ, ತಕ್ಷಣದ ನಿರ್ಧಾರ, ಮಾತೃಭೂಮಿಯ ಭಕ್ತಿ ಹೇಗಿರಬೇಕೆಂದು ಓಬವ್ವಳ ಜೀವನ ನಮಗೆ ಕಲಿಸಿಕೊಡುತ್ತದೆ ಎಂದು ಹೇಳಿದರು.
ಒನಕೆ ಓಬವ್ವಳ ಪ್ರಾಮಾಣಿಕತೆ, ಸಂವೇದನಾಶೀಲತೆ ಮತ್ತು ಸಾಹಸದಂತಹ ಧೀಮಂತ ವ್ಯಕ್ತಿತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಬಸವರಾಜ ರಾವೂರ ಒನಕೆ ಓಬವ್ವಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಗ್ರೇಡ್- ೨ ತಹಶೀಲ್ದಾರ್ ಆನಂದ ಪಮ್ಮಾರ, ವಲಯ ಅರಣ್ಯಾಧಿಕಾರಿ ಮಂಜುನಾಥ ಧುಳೆ, ಸಂತೋಷ ಹೊಟಗಾರ, ಶಿಕ್ಷಣ ಸಂಯೋಜಕ ಆನಂದ ಹುಣಸಗಿ, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಿಕ್ಷಕ ಬಸವರಾಜ ಗೊರನಾಳ ಕಾರ್ಯಕ್ರಮ ನಿರ್ವಹಿಸಿದರು.

