ಸಿಂದಗಿಯಲ್ಲಿ ರೂ.೨೪ಲಕ್ಷ ವೆಚ್ಚದಲ್ಲಿ ನಗರ ಯೋಜನಾ ಪ್ರಾಧಿಕಾರದ ಅನುದಾನದಡಿಯಲ್ಲಿ ನಿರ್ಮಿತ ಕಾರಂಜಿಗೆ ಶಾಸಕ ಅಶೋಕ ಮನಗೂಳಿ ಚಾಲನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಿಂದಗಿ ಕೆರೆಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ನಗರದ ಜನತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸ್ಥಳೀಯರಿಗೆ ಉತ್ತಮ ಉದ್ಯಾನವನ ನಿರ್ಮಿಸಬೇಕು ಎಂಬ ಕನಸು ಹೊಂದಿದ್ದೇನೆ. ಈ ನಿಟ್ಟಿನಲ್ಲಿ ಸರ್ಕಾರ, ನಗರಸಭೆ ಹಾಗೂ ಪ್ರಾಧಿಕಾರದಿಂದ ಅನುದಾನ ಕ್ರೋಢೀಕರಿಸಿ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ನಗರದ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಕೆರೆಯಲ್ಲಿ ರೂ.೨೪ಲಕ್ಷ ವೆಚ್ಚದಲ್ಲಿ ನಗರ ಯೋಜನಾ ಪ್ರಾಧಿಕಾರದ ಅನುದಾನದಡಿಯಲ್ಲಿ ನೂತನ ಕಾರಂಜಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆರೆಯನ್ನು ಕೇವಲ ನೀರಿನ ಮೂಲವಾಗಿ ಉಳಿಸದೆ, ನಗರದ ಜನರಿಗೆ ಅನುಕೂಲವಾಗುವ ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಪ್ರೇಕ್ಷಣೀಯ ಸ್ಥಳವನ್ನಾಗಿ ರೂಪಿಸಬೇಕೆಂಬ ಉದ್ದೇಶದಿಂದ ಕಾರಂಜಿ ಅಳವಡಿಸಲಾಗಿದೆ. ಮುಂಬರುವ ದಿನಗಳಲ್ಲಿ ರೂ.೩ಕೋಟಿ ೪ಲಕ್ಷ ಅನುದಾನದಲ್ಲಿ ಕೆರೆಗೆ ಸಂಬಂಧಿಸಿದ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಲಿವೆ. ಸಿಂದಗಿ ಕೆರೆಯ ಅಭಿವೃದ್ಧಿಯನ್ನು ವಿನೂತನ ರೀತಿಯಲ್ಲಿ ಕೈಗೊಳ್ಳಬೇಕೆಂಬ ಅಭಿಲಾಷೆ ಹೊಂದಿದ್ದೇನೆ. ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದರೊಂದಿಗೆ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನರ ನಿರೀಕ್ಷೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಹಣಮಂತ ಸುಣಗಾರ ಮಾತನಾಡಿ, ನಗರದ ಸೌಂದರ್ಯೀಕರಣಕ್ಕೆ ನಗರ ಯೋಜನಾ ಪ್ರಾಧಿಕಾರ ಯಾವಾಗಲೂ ಸಹಕಾರ ನೀಡುತ್ತದೆ. ಇನ್ನೂ ಇದರ ಅಭಿವೃದ್ಧಿಗಾಗಿ ನಮ್ಮ ಸಮಿತಿಯು ಶ್ರಮಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶರಣಪ್ಪ ವಾರದ, ಸಂದೀಪ ಚೌರ, ಭಾಷಾಸಾಬ ತಾಂಬೊಳ್ಳಿ, ಹಾಸಿಂ ಆಳಂದ, ಶಾಂತೂ ರಾಣಾಗೋಳ, ಅಜರ್ ನಾಟೀಕಾರ, ಕುಮಾರ ದೇಸಾಯಿ, ಸತೀಶ ಕಕ್ಕಸಗೇರಿ, ಅಂಬರೀಶ ಚೌಗಲೆ, ಎಂ.ಎಂ.ಖತೀಬ, ಪ್ರತಿಬಾ ಚೆಳ್ಳಗಿ, ಜಯಶ್ರೀ ಹದನೂರ, ಶಾರದಾ ಬೇಟಗೇರಿ, ವರ್ಷಾ ಪಾಟೀಲ, ಶ್ರೀಶೈಲ ಯಳಮೇಲಿ, ರಮೇಶ ನಡುವಿನಕೇರಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

