ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆ ಹಾಗೂ ಕೇಂದ್ರ ಸರ್ಕಾರದ ಅನುದಾನದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಸಮಾರಂಭದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರನ್ನು ಆಹ್ವಾನ ವಿಷಯವಾಗಿ ನಿರ್ಲಕ್ಷ್ಯ ನೀತಿ ಅನುಸರಿಸುತ್ತಿರುವ ಜಿಲ್ಲಾಡಳಿತ ಕ್ರಮ ಖಂಡನೀಯ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಯಲ್ಲಪ್ಪ ಹಾದಿಮನಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿಯಮಾವಳಿ ಇದ್ದರೂ ಸಂಸದರನ್ನು ಆಹ್ವಾನ ನೀಡದೇ, ಪ್ರಧಾನಮಂತ್ರಿಗಳ ಭಾವಚಿತ್ರ ಹಾಗೂ ಸಂಸದರ ಭಾವಚಿತ್ರವೂ ಅಳವಡಿಸದೇ ಅವರಿಗೆ ಆಹ್ವಾನ ನೀಡದೇ ಅಗೌರವ ತೋರುತ್ತಿರುವ ಹೆಜ್ಜೆ ಸರಿಯಲ್ಲ. ಜಿಗಜಿಣಗಿ ಅವರು ಸರಳತೆಯ ಸಾಕಾರ ಮೂರ್ತಿ ಎನ್ನುವ ಕಾರಣಕ್ಕೆ ಈ ರೀತಿ ನಿರ್ಲಕ್ಷ್ಯ ತೋರಲಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಶಿಷ್ಟಾಚಾರ ಪಾಲನೆ ಸರ್ಕಾರಿ ಅಧಿಕಾರಿಗಳ ಕರ್ತವ್ಯ, ಈ ವಿಷಯವಾಗಿ ಸಂಸದರು ಪತ್ರ ಬರೆದು ಗಮನಕ್ಕೆ ತರಬೇಕಾದ ಅನಿವಾರ್ಯತೆ ಬಂದಿರುವುದು ವ್ಯವಸ್ಥೆ ದುರಂತ.
ಭಾರತ ಸರ್ಕಾರದ ಅಧಿಕೃತ ಶಿಷ್ಟಾಚಾರದ ಪ್ರಕಾರ ಸಂಸದರಿಗೆ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗಿಂತ ಉನ್ನತ ಸ್ಥಾನವಿದೆ. ಆದರೂ ಜಿಲ್ಲಾಡಳಿತ ಈ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಸಂಸದರು ಹೇಳಿದ್ದಾರೆ. ಈ ವಿಷಯ ಸಣ್ಣ ವಿಷಯವಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಜಿಲ್ಲಾಡಳಿತ ಅಗತ್ಯ ಮುತವರ್ಜಿ ವಹಿಸಬೇಕು. ಅಲ್ಲದೇ, ಕೇಂದ್ರ ಸರ್ಕಾರದ ಸಹಭಾಗಿತ್ವದ ಯೋಜನೆಗಳ ಭೂಮಿಪೂಜೆ, ಉದ್ಘಾಟನೆ ಹಾಗೂ ಚಾಲನಾ ಕಾರ್ಯಕ್ರಮಗಳ ಬ್ಯಾನರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಮತ್ತು ಭಾವಚಿತ್ರ ಅಳವಡಿಸುವುದು ಅಗತ್ಯವಾಗಿದೆ ಎಂದು ಯಲ್ಲಪ್ಪ ಹಾದಿಮನಿ ಹೇಳಿದ್ದಾರೆ.

