ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ರೈತ ಹೋರಾಟಕ್ಕೆ ಯಾವುದೇ ಪಕ್ಷ, ಜಾತಿ ಇಲ್ಲ. ಪ್ರತಿಭಟಣೆಯಲ್ಲಿ ಎಲ್ಲ ಪಕ್ಷಗಳಿಗೆ ಮತ ನೀಡಿದವರು ಹಾಗೂ ಸರ್ವ ಧರ್ಮದ ರೈತರು ಭಾಗವಹಿಸಿದ್ದರು, ಅವರಿಗೆ ಅನ್ಯಾಯವಾಗದಂತೆ ಸರಕಾರ ಹಾಗೂ ಜನಪ್ರತಿನಿಧಿಗಳು ನಡೆದುಕೊಳ್ಳಬೇಕೆಂದು ರೈತ ನಾಯಕರಾದ ಶಶಿಕಾಂತ ಗುರೂಜಿ ಹೇಳಿದರು.
ಗ್ರಾಮದ ಬಸವ ಪೇಟ್ರೋಲಿಯಂ ಆವರಣದಲ್ಲಿ ರವಿವಾರ ರಾತ್ರಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರ ಸರಕಾರದ ವಿರುದ್ದ ಮಾತನಾಡಿದರೆ ಕಾಂಗ್ರೆಸ್ ಪ್ರೇರಿತ ಹೋರಾಟವೆನ್ನುತ್ತಾರೆ, ಡಿ.ಕೆ. ಶಿವಕುಮಾರ ವಿರುದ್ದ ಹೋರಾಟಕ್ಕಿಳಿದರೆ ಬಿಜೇಪಿ ಪ್ರೇರಿತ ಹೋರಾಟವೆನ್ನುತ್ತಾರೆ ಹಾಗಾದರೆ ನಾವು ಯಾರ ವಿರುದ್ದ ಹೋರಾಟ ಮಾಡಬೇಕು. ಎಂಎಸ್‌ಪಿ ಕೇಂದ್ರ ಸರಕಾರ ಕೊಡಬೇಕು ಎಸ್‌ಎಪಿ ರಾಜ್ಯ ಸರಕಾರ ಕೊಡಬೇಕು ಇಬ್ಬರ ವಿರುದ್ದವೂ ನಮ್ಮ ಹೋರಾಟವಿದ್ದು ರೈತರನ್ನು ಹಗುರವಾಗಿ ಪರಿಗಣಿಸಬೇಡಿ ಎಂದರು.
ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಮಾತನಾಡಿ, ಚುನ್ನಪ್ಪ ಪೂಜಾರಿ, ಶಶಿಕಾಂತ ಗುರೂಜಿಯವರ ನೇತ್ರತ್ವದ ರೈತರ ಹೋರಾಟದ ಫಲವಾಗಿಯೇ ಕಾರ್ಖಾನೆಗಳ ಮಾಲಿಕರು ಕಬ್ಬಿನ ಬೆಳೆಗೆ ಹೆಚ್ಚಿನ ದರ ಕೊಟ್ಟಿದ್ದಾರೆ ವಿನಹ ತಮ್ಮ ಮರ್ಜಿಯಿಂದ ಒಂದು ಪೈಸೆಯೂ ಹೆಚ್ಚಿಸುತ್ತರಲಿಲ್ಲ ಎಂದರು.
ಕಾಂಗ್ರೆಸ್ ಧುರೀಣ ರಾಜು ಬಗನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಶಾಸಕ ಸವದಿ ವಿವಾದಾತ್ಮಕ ಹೇಳಿಕೆ; ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಸಿದ್ದು ಸವದಿಯವರು ರೈತರ ಹಿತಕ್ಕಾಗಿ ಚುನ್ನಪ್ಪ ಪೂಜಾರಿ, ಶಶಿಕಾಂತ ಗುರೂಜಿಯವರ ತೀಕ್ಷ್ಣ ಹೋರಾಟದ ಕುರಿತು ಎರಡು ಮಾತಿಲ್ಲ, ಆದರೆ ಕಬ್ಬಿನ ದರ ರೂ.೩೬೦೦ ಒಪ್ಪಿಕೊಂಡಿದ್ದರ ಕುರಿತು ಅಸಮಾದಾನವಿದೆ, ಇಂತಹ ಬರಗಾಲದ ನಡುವೆ ರೈತರಿಗೆ ವೈಜ್ಞಾನಿಕ ಬೆಲೆ ನೀಡಬೇಕಾಗಿದೆ, ಒಬ್ಬ ಕಾರ್ಖಾನೆಯ ಮಾಲಿಕರೊಬ್ಬರು ಹೇಳುವಂತೆ ರೈತರು ಈ ಹೋರಾಟ ಮಾಡದಿದ್ದರೂ ಕಾಂಪಿಟೇಶನ್ ಮಾಡಿ ಟನ್ ಕಬ್ಬಿಗೆ ೪೫೦೦ ರೂ.ಗೆ ತಗೋತಿದ್ವಿ ಈ ಹೋರಾಟ ಮಾಡುವ ಮೂಲಕ ನಮಗೆ ಲಾಭಮಾಡಿಕೊಟ್ಟಿದ್ದಾರೆ ಎನ್ನುತಿದ್ದಾರೆ. ಅದೇನೆ ಆದರೂ ನಮ್ಮನ್ನು ಪಕ್ಷದಿಂದ ಹೊರಹಾಕಿದರೂ ರೈತರ ಹೋರಾಟವನ್ನು ನಾನು ಬೆಂಬಲಿಸುತ್ತೇನೆ ಎಂದರು.
ಇದಕ್ಕೆ ಶಶಿಕಾಂತ ಗುರೂಜಿ ಪ್ರತಿಕ್ರಿಯಿಸಿ ಶಾಸಕರಿಗೆ ಹೋರಾಟದ ಕುರಿತ ಅರಿವು ಕಡಿಮೆ ಇದ್ದಂತೆ ಕಾನೀಸುತ್ತೆ, ಕಾರ್ಖಾನೆ ಮಾಲಿಕರು ಹತ್ತು ರುಪಾಯಿ ಹೆಚ್ಚಿಸಲು ಬಿಕ್ಷೆ ನೀಡಿದಂತೆ ಚೌಕಾಶಿ ಮಾಡುತ್ತಾರೆ, ಕಾರ್ಖಾನೆ ಮುಚ್ಚುವ ಬೆದರಿಕೆ ಹಾಕುತ್ತಾರೆ ಹೊರಗಿನಿಂದ ಮಾತನಾಡುವುದಕ್ಕೂ ಹೋರಾಟಕ್ಕಿಳಿದು ಮಾತನಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ ಎಂದರು.
ಕಾರ್ಯಕ್ರಮದಲ್ಲಿ ಚನ್ನಪ್ಪ ತೇಲಿ, ವಿದ್ಯಾಧರ ಸವದಿ, ಗ್ರಾಮದ ಪ್ರಮುಖರಾದ ಅಣ್ಣಪ್ಪಗೌಡ ಪಾಟೀಲ, ಮಮದಾಪೂರ, ಬಸಪ್ಪ ಮುಗಳಖೋಡ, ಗುರಲಿಂಗಪ್ಪ ಪೂಜಾರಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪಾ ಪಾಲಭಾವಿ, ಬೀರಪ್ಪ ಹಳೆಮನಿ, ಪ್ರಭು ಮುಧೋಳ, ಇಲಾಹಿ ಜಮಖಂಡಿ ಸೇರಿದಂತೆ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

