ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನದಲ್ಲಿ ಮಂಜಪ್ಪನವರು ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ‘ಬಸವೇಶ್ವರ ಸೇವಾದಳ’ ಸಂಘಟನೆಯ ಮೂಲಕ ಅಧಿವೇಶನದ ಯಶಸ್ಸಿಗೆ ಶ್ರಮಿಸಿದರು.
ಉದಯರಶ್ಮಿ ದಿನಪತ್ರಿಕೆ
ಹರ್ಡೇಕರ ಮಂಜಪ್ಪನವರು ಕರ್ನಾಟಕದ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ ಕ್ಷೇತ್ರಗಳನ್ನೊಳಗೊಂಡಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಮಾಜಸೇವಕರು. ಆಮೂಲಕ ಕರ್ನಾಟಕದ ಗಾಂಧಿ ಎಂದು ಹೆಸರಾಗಿದ್ದವರು.
೧೮೮೬ರ ಫೆಬ್ರುವರಿ ೧೮ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಬಡ ಕುಟುಂಬ ಒಂದರಲ್ಲಿ ಜನಿಸಿದರು. ಇವರ ಅಣ್ಣನೆ ಇವರ ಪಾಲನೆಯನ್ನು ಮಾಡಿದ್ದಲ್ಲದೆ, ಇವರ ಎಲ್ಲ ಧ್ಯೇಯ ಸಾಧನೆಗಳಿಗೆ ಒತ್ತಾಸೆಯಾಗಿ ನಿಂತನು. ಮಂಜಪ್ಪನವರು ಕಲಿತಿದ್ದು ಕೇವಲ ಕನ್ನಡ, ೭ನೆಯ ತರಗತಿಯವರೆಗೆ. ತಮ್ಮ ಸ್ವಂತ ಪ್ರಯತ್ನಗಳಿಂದ ಇಂಗ್ಲಿಷ್ ಕಲಿಯಲು ಪ್ರಯತ್ನಿಸಿದರೂ ಸಹ ಅದರಲ್ಲಿ ಹೆಚ್ಚಿನ ಪ್ರಗತಿಯಾಗಲಿಲ್ಲ. ೧೯೦೩ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅವರು ಉದ್ಯೋಗಕ್ಕೆ ಹತ್ತಬೇಕಾಯಿತು. ಶಿರಸಿಯಲ್ಲಿ ತಾವು ಕಲಿತ ಶಾಲೆಯಲ್ಲಿಯೆ ಸಹಶಿಕ್ಷಕರಾದರು. ೧೯೦೫ರಲ್ಲಿ ಪ್ರತ್ಯೇಕ ಶಾಲೆಯ ಏಕೋಪಾಧ್ಯಾಯರಾದರು.

ಹರ್ಡೇಕರ ಮಂಜಪ್ಪನವರನ್ನು ಅವರ ಗಾಂಧಿವಾದಿ ಜೀವನಶೈಲಿ, ರಾಷ್ಟ್ರೀಯತೆ ಮತ್ತು ಸಮಾಜ ಸುಧಾರಣೆಯ ಕೊಡುಗೆಯಿಂದಾಗಿ “ಕರ್ನಾಟಕದ ಗಾಂಧಿ” ಎಂದು ಕರೆಯಲಾಗುತ್ತದೆ. ಮಹಾತ್ಮ ಗಾಂಧೀಜಿ ಹಾಗೂ ಹರ್ಡೇಕರ ಮಂಜಪ್ಪನವರ ನಡುವೆ ಆಳವಾದ ವೈಚಾರಿಕ ಮತ್ತು ವೈಯಕ್ತಿಕ ಒಡನಾಟವಿತ್ತು.
ಅವರಿಬ್ಬರ ನಡುವಿನ ಪ್ರಮುಖ ಸಂಬಂಧ ಮತ್ತು ಒಡನಾಟದ ವಿವರಗಳು
ಗಾಂಧಿ ವಿಚಾರಧಾರೆಗೆ ಆಕರ್ಷಣೆ
ಮಂಜಪ್ಪನವರು ಆರಂಭದಲ್ಲಿ ಬಾಲಗಂಗಾಧರ ತಿಲಕರ ರಾಜಕೀಯ ಸಿದ್ಧಾಂತಕ್ಕೆ ಒಲವು ಹೊಂದಿದ್ದರು. ಆದರೆ ನಂತರದ ದಿನಗಳಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸೆ, ಸತ್ಯಾಗ್ರಹ ಮತ್ತು ಸ್ವದೇಶಿ ತತ್ವಗಳಿಗೆ ಆಕರ್ಷಿತರಾಗಿ ಅವರ ಕಟ್ಟಾ ಅನುಯಾಯಿಯಾದರು.
ಸಬರ್ಮತಿ ಆಶ್ರಮದ ವಾಸ್ತವ್ಯ
ಗಾಂಧೀಜಿಯವರ ಸತ್ಯಾಗ್ರಹದ ಮಾರ್ಗವನ್ನು ಹತ್ತಿರದಿಂದ ತಿಳಿಯಲು ಮಂಜಪ್ಪನವರು ಗುಜರಾತ್‌ನ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿ ಮೂರು ವಾರಗಳ ಕಾಲ ತಂಗಿದ್ದರು. ಒಬ್ಬ ನಿಜವಾದ ಸತ್ಯಾಗ್ರಹಿಯ ಜೀವನ ಕ್ರಮವನ್ನು ಅಲ್ಲಿ ಸ್ವತಃ ಅನುಭವಿಸಿ ಕಲಿತರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನ (1924)
ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನದಲ್ಲಿ ಮಂಜಪ್ಪನವರು ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ‘ಬಸವೇಶ್ವರ ಸೇವಾದಳ’ ಸಂಘಟನೆಯ ಮೂಲಕ ಅಧಿವೇಶನದ ಯಶಸ್ಸಿಗೆ ಶ್ರಮಿಸಿದರು.

ಬಸವಣ್ಣನವರ ತತ್ವಗಳ ಪರಿಚಯ
ಬೆಳಗಾವಿ ಪ್ರವಾಸ ಮತ್ತು ಅಸ್ಪೃಶ್ಯತಾ ನಿವಾರಣಾ ಆಂದೋಲನದ ಸಮಯದಲ್ಲಿ ಮಂಜಪ್ಪನವರು ಗಾಂಧೀಜಿಯವರ ಜೊತೆ ಸಂಚರಿಸಿದರು. ಈ ಸಂದರ್ಭದಲ್ಲಿ ಅವರು 12ನೇ ಶತಮಾನದಲ್ಲಿ ಮಹಾತ್ಮ ಬಸವಣ್ಣನವರು ನಡೆಸಿದ ಅಸ್ಪೃಶ್ಯತಾ ನಿವಾರಣೆ ಮತ್ತು ಜಾತ್ಯಾತೀತ ಸಮಾಜದ ಹೋರಾಟದ ಕುರಿತು ಗಾಂಧೀಜಿಯವರಿಗೆ ವಿವರಿಸಿದರು. ಇದು ಗಾಂಧೀಜಿಯವರ ಮೇಲೆಯೂ ಪ್ರಭಾವ ಬೀರಿತು. ಮಂಜಪ್ಪನವರು ತಾವು ಬರೆದ ಬಸವಣ್ಣನವರ ಚರಿತ್ರೆಯ ಪುಸ್ತಕವನ್ನು ಗಾಂಧೀಜಿಯವರಿಗೆ ಉಡುಗೊರೆಯಾಗಿ ನೀಡಿದ್ದರು.
ಗಾಂಧಿ ಮಾರ್ಗದ ಪ್ರಚಾರ ಮತ್ತು ಸಾಹಿತ್ಯ
ಮಂಜಪ್ಪನವರು ಕನ್ನಡದಲ್ಲಿ ಗಾಂಧೀಜಿಯವರ ತತ್ವಗಳನ್ನು ಪಸರಿಸಲು ‘ಮಹಾತ್ಮ ಗಾಂಧಿ ಚರಿತ್ರೆ’ (ಗಾಂಧೀಜಿಯವರ ಮೊದಲ ಕನ್ನಡ ಜೀವನಚರಿತ್ರೆ – 1919) ಮತ್ತು ‘ಸತ್ಯಾಗ್ರಹ ಧರ್ಮ’ ಎಂಬ ಪುಸ್ತಕಗಳನ್ನು ಬರೆದರು. ತಮ್ಮ ಭಾಷಣಗಳು ಹಾಗೂ ಪತ್ರಿಕೆಗಳ ಮೂಲಕ ಉತ್ತರ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಖಾದಿ, ಸ್ವದೇಶಿ ಮತ್ತು ಅಸ್ಪೃಶ್ಯತಾ ನಿವಾರಣೆಯ ಗಾಂಧಿ ಸಂದೇಶಗಳನ್ನು ಹರಡಿದರು.
ಅಲಮಟ್ಟಿ ಆಶ್ರಮ ಶಾಲೆ
ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ಬಿಜಾಪುರ ಜಿಲ್ಲೆಯ ಅಲಮಟ್ಟಿಯಲ್ಲಿ ಆಶ್ರಮ ಶಾಲೆಯನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಸ್ವಾವಲಂಬನೆ ಮತ್ತು ರಾಷ್ಟ್ರೀಯ ಶಿಕ್ಷಣವನ್ನು ನೀಡಿದರು.
ಗಾಂಧೀಜಿಯವರಂತೆ ಬ್ರಹ್ಮಚರ್ಯ ವ್ರತ ಪಾಲಿಸುತ್ತಾ, ಸರಳ ಉಡುಪು ಧರಿಸಿ, ಸ್ವತಃ ನೂಲುತ್ತಾ ಸಂಪೂರ್ಣ ಗಾಂಧಿ ಮಾರ್ಗದಲ್ಲೇ ಬದುಕಿದ ಮಂಜಪ್ಪನವರು ನಿಜ ಅರ್ಥದಲ್ಲಿ ಕರ್ನಾಟಕದ ಗಾಂಧಿಯಾಗಿದ್ದರು.
ವಿದಾಯಕ ಕಾರ್ಯಕ್ರಮಗಳು
೧೯೨೫ರಲ್ಲಿ ಮಂಜಪ್ಪನವರ ತಾಯಿ ತೀರಿಕೊಂಡರು. ಆಬಳಿಕ ಮಂಜಪ್ಪನವರು ಕರ್ನಾಟಕದ ಉದ್ದಗಲಕ್ಕೂ ಹಳ್ಳಿಗಳಲ್ಲಿ ಸಂಚರಿಸಿದರು. ಗ್ರಾಮೋದ್ಧಾರದ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ನೆರವೇರಿಸಿದರು. “ರಾಟಿ ಸಂಘ”ಗಳನ್ನು ಸ್ಥಾಪಿಸಿದರು. ನೈತಿಕ ಪ್ರಚಾರ ಮಾಡಿದರು.
೧೯೨೭ರ ಮೇ ೧೩ರಂದು ಮಂಜಪ್ಪನವರು ಆಲಮಟ್ಟಿಯಲ್ಲಿ ವಿದ್ಯಾಲಯವನ್ನು ಸ್ಥಾಪಿಸಿದರು. ಈ ವಿದ್ಯಾಲಯದಲ್ಲಿ ಕೇವಲ ಔಪಚಾರಿಕ ಶಿಕ್ಷಣವನ್ನಲ್ಲದೆ , ಜೀವನ ಶಿಕ್ಷಣ ಎನ್ನುವ ಹೆಸರಿನಲ್ಲಿ ಕೈಕಸಬುಗಳನ್ನೂ ಸಹ ಕಲಿಸಲಾಗುತ್ತಿತ್ತು. ಗಾಂಧೀಜಿಯವರೂ ಸಹ ಆನಂತರದ ತಮ್ಮ ಶಿಕ್ಷಣಪದ್ಧತಿಯಲ್ಲಿ ಇಂತಹದೆ ನಯೀ ತಾಲೀಮ ಎನ್ನುವ ವಿಧಾನವನ್ನು ಅಳವಡಿಸಿಕೊಂಡರು.
೧೯೩೦ರಲ್ಲಿ ಮಂಜಪ್ಪನವರು “ಉದ್ಯೋಗ” ಎನ್ನುವ ಮಾಸಪತ್ರಿಕೆಯನ್ನು ಹಾಗು ಮಕ್ಕಳ ಸಾಹಿತ್ಯಮಾಲೆಯನ್ನು ಪ್ರಾರಂಭಿಸಿದರು. ೧೯೩೧ರಲ್ಲಿ ಶರಣಸಂದೇಶ ಎನ್ನುವ ಮಾಸಪತ್ರಿಕೆಯನ್ನು ಹೊರಡಿಸತೊಡಗಿದರು.
೧೯೩೪ರಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಾಗ ಮಂಜಪ್ಪನವರು ಅವರ ಜೊತೆಗಿನ ಸುತ್ತಾಟದಲ್ಲಿ ಪಾಲ್ಗೊಂಡರು.
೧೯೪೬ರಲ್ಲಿ ಮಂಜಪ್ಪನವರು ಪ್ರಗತಿ ಗ್ರಂಥಮಾಲೆಯನ್ನು ಪ್ರಾರಂಭಿಸಿದರು.
೧೯೪೭ ಜನೆವರಿ ೩ರಂದು ಹರ್ಡೇಕರ ಮಂಜಪ್ಪನವರು ನಿಧನರಾದರು.


