ಮಾಜಿ ಸಿಎಂ ಯಡಿಯೂರಪ್ಪ ಒತ್ತಾಯ | ಪಕ್ಷ ಸಂಘಟಿಸುವ ಸಾಮರ್ಥ್ಯ | ಪಕ್ಷ ಸಂಘಟಿಸಲು ಮುಂದಾಗುವ ಬಿಎಸ್ವೈ
ಬೆಂಗಳೂರು: ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿಯವರು ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರನ್ನು ಘೋಷಣೆ ಮಾಡದಿರುವುದು ಅವರಿಗೆ ಬಹುದೊಡ್ಡ ಹಿನ್ನಡೆಗೂ ಕಾರಣವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಹೈಕಮಾಂಡ್ ಮಾತ್ರ ನೇಮಕಾತಿಗೆ ಮೀನಮೇಷ ಎಣಿಸುತ್ತಿದೆ. ಈ ನಿಟ್ಟಿನಲ್ಲಿ ಯಾರು ಅಧ್ಯಕ್ಷ ಆಗಬೇಕು ಎಂಬ ಬಗ್ಗೆ ಇನ್ನು ಗೊಂದಲ ಮುಂದುವರೆದಿದೆ. ಈಗಾಗಲೇ ಕೇಳಿ ಬಂದಿರುವಂತೆ ಬಿಎಸ್ ಯಡಿಯೂರಪ್ಪ ಅವರ ಮಗ ಶಾಸಕ ಬಿವೈ ವಿಜಯೇಂದ್ರ ಅವರ ಹೆಸರು ಈ ಹುದ್ದೆಗೆ ಕೇಳಿ ಬಂದಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಲಿಂಗಾಯತ ಸಮುದಾಯದ ಕೋಪವೇ ಕಾರಣ ಎಂಬ ಬಗ್ಗೆ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯನ್ನು ಬಿವೈ ವಿಜಯೇಂದ್ರ ಅವರಿಗೆ ನೀಡಬೇಕು ಎಂದು ಎಲ್ಲೆಡೆ ಆಗ್ರಹ ಕೇಳಿ ಬಂದಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ವಿಜಯೇಂದ್ರರನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.
ಈ ಮಧ್ಯೆ ರಾಜ್ಯಾಧ್ಯಕ್ಷ ಹುದ್ದೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ನೇಮಿಸಲಾಗುತ್ತದೆ ಎಂದು ಮಾತುಗಳು ಕೇಳಿ ಬಂದಿದ್ದವು. ಆದರೆ ಅವರು ನಾನು ಇಲ್ಲೇ ಸಂತಸದಿಂದ ಇದ್ದೇನೆ. ನನಗೆ ರಾಜ್ಯ ಅಧ್ಯಕ್ಷ ಹುದ್ದೆ ಬೇಕಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಬಿವೈ ವಿಜಯೇಂದ್ರ ಅವರ ಹೆಸರು ಮತ್ತೆ ಕೇಳಿ ಬಂದಿದೆ.
ವಿಜಯೇಂದ್ರ ಅವರ ಆಯ್ಕೆಯು ಮುಂಬರುವ ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಏಕೆಂದರೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದಕ್ಕೆ ಸೇರಿದ ಬಿಎಸ್ ಯಡಿಯೂರಪ್ಪ ಅವರ ಕಡಗಣನೆಯಿಂದ ಅಧಿಕಾರ ಕಳೆದುಕೊಳ್ಳುವಂತಾಯಿತು ಎಂದು ವಿಶ್ಲೇಷಣೆಗಳು ಕೇಳಿ ಬಂದಿದ್ದವು. ಹೀಗಾಗಿ ಮುಂದೆಯೂ ಅದೇ ತಪ್ಪುಗಳನ್ನು ಹೈಕಮಾಂಡ್ ಮಾಡಬಾರದು ಎಂಬ ಆಗ್ರಹಗಳು ಕೇಳಿ ಬಂದಿವೆ.
ಇದಕ್ಕಾಗಿ ಪಕ್ಷದಲ್ಲಿರುವ ಆರ್‌ಎಸ್‌ಎಸ್ ನಾಯಕರ ಗತಿ ಏನು ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಆರ್‌ಎಸ್‌ಎಸ್ ನಾಯಕರ ಮಾತು ಕೇಳಿ ಯಡಿಯೂರಪ್ಪ ಅವರ ಕಡೆಗಣನೆ ಮಾಡಿದ ಪರಿಣಾಮ ಪಕ್ಷ ಹೀನಾಯ ಸೋಲು ಕಂಡಿತು ಎಂಬುದು ಎಲ್ಲರ ಅಭಿಮತ. ಆದ್ದರಿಂದ ಬಿವೈ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಲು ಯಡಿಯೂರಪ್ಪ ಮುಂದಾಗಿದ್ದಾರೆ. ಅಲ್ಲದೆ ವಿಜಯೇಂದ್ರ ರಾಜ್ಯದಾದ್ಯಂತ ಓಡಾಡಿ ಪಕ್ಷ ಸಂಘಟಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಹೀಗಾಗಿ ಬಿಎಸ್ ಯಡಿಯೂರಪ್ಪ ಅವರು ಮತ್ತೆ ಆ್ಯಕ್ಟಿವ್ ಆಗಿ ಬರ ಪರಿಸ್ಥಿತಿ ಅಧ್ಯಯನ ಯಾತ್ರೆ ಮಾಡಲು ಮುಂದಾಗಿದ್ದಾರೆ. ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಮಾಡಲು ಹಾಗೂ ವಿಪಕ್ಷ ನಾಯಕನ ನೇಮಕಕ್ಕೆ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.
ಈಗ ಹೈಕಮಾಂಡ್ ಬಿಎಸ್ ಯಡಿಯೂರಪ್ಪನವರ ಮಾತು ಕೇಳಬೇಕಾಗಿದೆ. ಮುಂದಿನ ವರ್ಷವೇ ಲೋಕಸಭಾ ಚುನಾವಣೆ ಇರುವುದರಿಂದ ಬಿಜೆಪಿ ಅವರನ್ನು ಮತ್ತೆ ಕಡೆಗಣಿಸುವಂತಿಲ್ಲ, ಬಿವೈ ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಹುದ್ದೆ ಕೊಟ್ಟರೆ ಯಡಿಯೂರಪ್ಪ ಅವರು ಪಕ್ಷ ಸಂಘಟಿಸಲು ಮುಂದಾಗುತ್ತಾರೆ. ಇಲ್ಲದಿದ್ದರೆ ಮತ್ತೆ ಕಾಂಗ್ರೆಸ್‌ಗೆ ಪರೋಕ್ಷವಾಗಿ ಲಾಭವಾಗುತ್ತದೆ ಎಂಬುದು ಎಲ್ಲರ ಮಾತು.