ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಹಿರಿಯ ಉಪನೋಂದಣಿ ಕಚೇರಿ ವ್ಯಾಪ್ತಿಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಸ್ಥಿರಾಸ್ತಿಗಳ ೨೦೨೬-೨೭ನೇ ಸಾಲಿನ ಪರಿಷ್ಕೃತ ಮಾರ್ಗಸೂಚಿ ಬೆಲೆಗಳ ಕರಡು ಪ್ರತಿಯನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ವಿಜಯಪುರ ತಹಶೀಲ್ದಾರರು ಹಾಗೂ ಮಾರುಕಟ್ಟೆ ಮೌಲ್ಯ ನಿರ್ಧರಣಾ ಉಪಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ನವೆಂಬರ್ ೬ರಂದು ನಡೆದ ಉಪಸಮಿತಿ ಸಭೆಯ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಪರಿಷ್ಕೃತ ಮಾರ್ಗಸೂಚಿ ಬೆಲೆಗಳ ಕರಡು ಪ್ರತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ವಿಜಯಪುರದ ಹಿರಿಯ ಉಪನೋಂದಣಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಈ ಬೆಲೆಗಳ ಕುರಿತು ಸಾರ್ವಜನಿಕರು ತಮ್ಮ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆಸಕ್ತರು ನವೆಂಬರ್ ೯ರಿಂದ ೨೮ರವರೆಗೆ ತಮ್ಮ ಲಿಖಿತ ಆಕ್ಷೇಪಣೆಗಳನ್ನು ಹಿರಿಯ ಉಪನೋಂದಣಿ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದು ಹಿರಿಯ ಉಪನೋಂದಣಿ ಅಧಿಕಾರಿಗಳು ಹಾಗೂ ಮಾರುಕಟ್ಟೆ ಮೌಲ್ಯ ನಿರ್ಧರಣಾ ಉಪಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಭೀಮಾಶಂಕರ ಬಿರಾದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
