ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಾನವ ಧರ್ಮದ ಒಳಿತು ಹಾಗೂ ಭಾರತೀಯ ಆಚಾರ, ವಿಚಾರ, ಪರಂಪರೆಯ ಬೆಳವಣಿಗೆಗಾಗಿ ಮಾಠಾಧೀಶರು ಚಿಂತನೆ ಮಾಡುವುದು ಅಗತ್ಯವಾಗಿದೆ ಎಂದು ಕೋರವಾರ ಹಿರೇಮಠದ ತಪೋರತ್ನ ಬಸವಲಿಂಗ ಶಿವಾಚಾರ್ಯರು ಹೇಳಿದರು.
ಪಟ್ಟಣದ ಜಡಿಮಠದಲ್ಲಿ ಶನಿವಾರ ಜರುಗಿದ ದೇವರಹಿಪ್ಪರಗಿ-ತಾಳಿಕೋಟ ತಾಲ್ಲೂಕುಗಳ ಮಠಾಧೀಶರ ಒಕ್ಕೂಟದ ಚಿಂತನ ಮಂಥನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದು ಧರ್ಮದ ತಳಹದಿಯ ಮೇಲೆ ವೈಚಾರಿಕ ನೆಲೆಗಟ್ಟಿನ ಮೂಲಕ ಪ್ರತಿಯೊಬ್ಬರ ಬಾಳು, ಬದುಕು, ಬರಹ ಬೆಳವಣಿಗೆಯಾಗಬೇಕು. ಈ ನಿಟ್ಟಿನಲ್ಲಿ ಸಮುದಾಯಗಳಿಗೆ ಮಠಾಧೀಶರ ಮಾರ್ಗದರ್ಶನ ಅಗತ್ಯ. ಅದಕ್ಕಾಗಿ ನಾವು ಸಹ ಚಿಂತನಶೀಲರಾಗಿ, ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸೋಣ ಎಂದರು.
ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸಾಮಾಜಿಕ, ಧಾರ್ಮಿಕ ಕಾರ್ಯಗಳ ಕುರಿತು ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಮಹಾರಾಷ್ಟ್ರ ಶಿವಾಚಾರ್ಯ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಕೋರವಾರ ಹಿರೇಮಠದ ತಪೋರತ್ನ ಬಸವಲಿಂಗ ಶಿವಾಚಾರ್ಯರರನ್ನು ಸನ್ಮಾನಿಸಲಾಯಿತು.
ದೇವೂರ ಮರುಳಾರಾಧ್ಯ ಶಿವಾಚಾರ್ಯರು, ಸಾಸನೂರ ಮಹಾಂತಲಿಂಗ ಸ್ವಾಮೀಜಿ, ನಾವದಗಿ ರಾಜಗುರು ರಾಜೇಂದ್ರಶ್ರೀ, ಕಲಕೇರಿ ಸಿದ್ಧರಾಮಶ್ರೀ, ಸ್ಥಳೀಯ ಜಡೇಸಿದ್ಧೇಶ್ವರಶ್ರೀ, ಮಹಾಂತ ಸ್ವಾಮೀಜಿ, ಕೆಸರಟ್ಟಿ ಸೋಮಲಿಂಗ ಸ್ವಾಮೀಜಿ, ಕಡಕೋಳ ಮಡಿವಾಳೇಶ್ವರಶ್ರೀ, ಹರನಾಳ, ನಿವಾಳಖೇಡ ಸಂಗನಬಸವ ಸ್ವಾಮೀಜಿ, ಕೆರೂಟಗಿ ಶಿವಬಸವ ಸ್ವಾಮೀಜಿ ಇದ್ದರು.

