ಯಾಸೀನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಮೀರ್ ಮುಲ್ಲಾ ಕಾಲಿಗೆ ಪೊಲೀಸರ ಗುಂಡೇಟು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಮೊಳಗಿದೆ. ಯಾಸೀನ್ ಜುಬೇರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಮೀರ್ ಮುಲ್ಲಾ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಬಂಧಿಸಿದ್ದಾರೆ.
ಶನಿವಾರ ಬೆಳ್ಳಂಬೆಳಿಗ್ಗೆ ವಿಜಯಪುರ ಜಿಲ್ಲೆಯ ಅತಾಲಟ್ಟಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಸಮೀರ್ ಮುಲ್ಲಾ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ನವೆಂಬರ್ 5ರಂದು ಮುಂಡೆವಾಡಿ ಆಸ್ಪತ್ರೆಯ ಎದುರು ಯಾಸೀನ್ ಜುಬೇರ್ ಮೇಲೆ ಸಮೀರ್ ಮುಲ್ಲಾ ಗುಂಡಿನ ದಾಳಿ ನಡೆಸಿದ್ದ ಎನ್ನಲಾಗಿದೆ. ಪತ್ನಿಯನ್ನು ಆಸ್ಪತ್ರೆಗೆ ಕರೆತಂದಿದ್ದ ಯಾಸೀನ್, ಆಕೆಯ ಕಣ್ಣೆದುರೇ ಗುಂಡೇಟಿಗೆ ಬಲಿಯಾಗಿದ್ದರು. ಗುಂಡಿನ ದಾಳಿಯಲ್ಲಿ ಯಾಸೀನ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಘಟನೆಯ ಬಳಿಕ ಆರೋಪಿ ಸಮೀರ್ ಮುಲ್ಲಾ ಪರಾರಿಯಾಗಿದ್ದ. ಆತನ ಹಾಗೂ ಸಹಚರರ ಪತ್ತೆಗಾಗಿ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು.
ಇದೀಗ ಅತಾಲಟ್ಟಿ ಗ್ರಾಮದ ಬಳಿ ಸಮೀರ್ ಇರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.
ಗಾಯಗೊಂಡ ಆರೋಪಿ ಸಮೀರ್ ಮುಲ್ಲಾನನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಯಾಸೀನ್ ಜುಬೇರ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯ ಬಂಧನದೊಂದಿಗೆ ಪೊಲೀಸರ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

