ಚಡಚಣದಲ್ಲಿ ನಡೆದ ದುರ್ಘಟನೆ | ಎರಡು ಟ್ರಾಲಿಗಳಿಗೂ ವ್ಯಾಪಿಸಿದ ಬೆಂಕಿ | ಅಗ್ನಿಶಾಮಕ ವಾಹನ ಇಲ್ಲದೆ ಸಾರ್ವಜನಿಕರ ಪರದಾಟ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಶಿವಾಜಿ ಸರ್ಕಲ್ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು ₹50 ಸಾವಿರ ಮೌಲ್ಯದ ಜೋಳದ ಮೇವು (ಕಣಕಿ) ಸುಟ್ಟು ಕರಕಲಾಗಿದೆ. ರೈತ ವಿಠ್ಠಲ ಉಂಬರಜಿ ಅವರಿಗೆ ಸೇರಿದ ಮೇವು ಬೆಂಕಿಗಾಹುತಿಯಾಗಿದ್ದು, ಟ್ರ್ಯಾಕ್ಟರ್ ಚಾಲಕನ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಇಂಡಿಯಿಂದ ಮಹಾರಾಷ್ಟ್ರದ ಮಂಗಳವೇಡಾ ತಾಲೂಕಿನ ಚಿಕ್ಕಲಗಿ ಗ್ರಾಮದತ್ತ ಜೋಳದ ಮೇವು ತುಂಬಿಕೊಂಡು ಟ್ರ್ಯಾಕ್ಟರ್ಎಮ್.ಎಚ್.13ಇ ಕೆ 1548 ತೆರಳುತ್ತಿತ್ತು. ಈ ವೇಳೆ ಶಿವಾಜಿ ಸರ್ಕಲ್ ಬಳಿ ಟ್ರ್ಯಾಕ್ಟರ್ನ ಒಂದು ಗಾಲಿ ಪಂಕ್ಚರ್ ಆಗಿದ್ದರಿಂದ ಚಾಲಕ ವಾಹನ ನಿಲ್ಲಿಸಿ ಪಂಕ್ಚರ್ ಸರಿಪಡಿಸಿಕೊಂಡಿದ್ದನು. ಬಳಿಕ ಪ್ರಯಾಣ ಮುಂದುವರಿಸಲು ಸಿದ್ಧವಾಗುತ್ತಿದ್ದಂತೆ ಒಂದು ಟ್ರಾಲಿಯಲ್ಲಿದ್ದ ಮೇವು ಬೆಂಕಿಗೆ ಆಹುತಿಯಾಗಿದೆ. ಕ್ಷಣಾರ್ಧದಲ್ಲಿ ಬೆಂಕಿ ಮತ್ತೊಂದು ಟ್ರಾಲಿಗೂ ವ್ಯಾಪಿಸಿ ಸಂಪೂರ್ಣ ಮೇವು ಸುಟ್ಟು ಕರಕಲಾಗಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಸಮಯಪ್ರಜ್ಞೆ ಮೆರೆದು ಟ್ರ್ಯಾಕ್ಟರ್ನ್ನು ಟ್ರಾಲಿಗಳಿಂದ ಬೇರ್ಪಡಿಸಿದ್ದಾನೆ. ಇದರಿಂದ ಟ್ರ್ಯಾಕ್ಟರ್ಗೆ ಬೆಂಕಿ ವ್ಯಾಪಿಸುವುದು ತಪ್ಪಿದೆ. ಅಗ್ನಿ ಅವಘಡದಿಂದಾಗಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿ ಟ್ರಾಫಿಕ್ ಜಾಮ್ ಸಂಭವಿಸಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಚಡಚಣ ಪೊಲೀಸರು ವಾಹನ ಸಂಚಾರವನ್ನು ನಿಯಂತ್ರಿಸಿ, ಟ್ರಾಫಿಕ್ ವ್ಯವಸ್ಥೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪಟ್ಟಣದಲ್ಲಿ ಅಗ್ನಿಶಾಮಕ ವಾಹನದ ವ್ಯವಸ್ಥೆ ಇಲ್ಲದಿರುವುದರಿಂದ ಬೆಂಕಿ ನಂದಿಸಲು ತಕ್ಷಣ ನೆರವು ದೊರೆಯಲಿಲ್ಲ. ಬಳಿಕ ಸ್ಥಳೀಯ ನೀರಿನ ಟ್ಯಾಂಕರ್ಗಳ ಸಹಾಯದಿಂದ ಸಾರ್ವಜನಿಕರು ಬೆಂಕಿ ನಂದಿಸಿದರು. ಅಗ್ನಿಶಾಮಕ ವಾಹನ ಇಂಡಿಯಿಂದ ಚಡಚಣಕ್ಕೆ ಬರಲು ಸುಮಾರು ಒಂದು ಗಂಟೆ ಬೇಕಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಸ್ಥಳೀಯರೇ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು.
ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

