ವಿಜಯಪುರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಗತ್ತಿನಲ್ಲಿ ಶ್ರೀಮಂತ ಸಂಸ್ಕೃತಿ ಹೊಂದಿರುವ ಶ್ರೇಷ್ಠ ನಾಡೆಂದರೆ ಕರ್ನಾಟಕ. ಚದುರಿ ಹೋಗಿದ್ದ ಕನ್ನಡ ನೆಲವನ್ನು ಒಂದುಗೂಡಿಸಿ ಮೈಸೂರು ರಾಜ್ಯವನ್ನಾಗಿ ಮಾಡಲು ಅನೇಕರು ಹೋರಾಟ ಮಾಡಿದರು. ಮುಂದೆ ಮೈಸೂರು ರಾಜ್ಯ ಎನ್ನುವುದು ಕರ್ನಾಟಕ ಎಂದು ಮರು ನಾಮಕರಣವಾದ ಈ ಶುಭದಿನ ನಾವು ರಾಜ್ಯೋತ್ಸವ ಆಚರಿಸುತ್ತೇವೆ. ಇಂಥ ಶುಭ ಸಂದರ್ಭದಲ್ಲಿ ನಮ್ಮ ಇತಿಹಾಸವನ್ನು ಮೆಲುಕು ಹಾಕುವುದು ಹಾಗೂ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೭೧ ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ವಿಶ್ವಕ್ಕೆ ಮಾದರಿಯಾಗುವ ಪರಂಪರೆಯನ್ನು ಹೊತ್ತು ಬಂದಿರುವ ರಾಜ್ಯ ಎಂದರೆ ಕರ್ನಾಟಕ. ಗಂಗ, ಕದಂಬ, ರಾಷ್ಟ್ರಕೂಟರು ಸೇರಿದಂತೆ ಹಲವಾರು ರಾಜ ಮನೆತನಗಳು ಈ ರಾಜ್ಯವನ್ನು ಆಳುವುದರ ಜೊತೆಗೆ ಇಲ್ಲಿನ ಕಲೆ, ಸಾಹೀತ್ಯ, ಸಂಗೀತವನ್ನು ಶ್ರೀಮಂತಗೊಳಿಸಿದ್ದಾರೆ. ಪ್ರಪಂಚದಲ್ಲೇ ಒಂದು ಪುಟ್ಟ ಪ್ರಪಂಚವಾಗಿ ನಮ್ಮ ರಾಜ್ಯವನ್ನು ನಿರ್ಮಾಣ ಮಾಡಿದ್ದಾರೆ. ಇವರೆಲ್ಲ ನಿರ್ಮಾಣ ಮಾಡಿಕೊಟ್ಟ ರಾಜ್ಯವನ್ನು ಉಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖಸ್ಥ ಶರಣಗೌಡ ಪಾಟೀಲ್; ಕರ್ನಾಟಕ ಎನ್ನುವ ಶಬ್ದದಲ್ಲಿಯೇ ಒಂದು ರೋಮಾಂಚನವಿದೆ. ಇಲ್ಲಿನ ಚರಿತ್ರೆಯ ಪುಟಗಳನ್ನು ತಿರುವುತ್ತಾ ಸಾಗಿದರೆ ಒಂದು ಹೊಸ ಪ್ರಪಂಚವೇ ನಮ್ಮ ಕಣ್ಣೇದುರು ಅನಾವರಣಗೊಳ್ಳುತ್ತದೆ. ಭಾಷೆಯ ವಿಷಯವಾಗಿರಲಿ, ವೇಷದ ವಿಷಯವಾಗಿರಲಿ ಎಲ್ಲದರಲ್ಲಿಯೂ ವೈವಿಧ್ಯತೆ ಹೊಂದಿದ ರಾಜ್ಯ ನಮ್ಮ ಕರ್ನಾಟಕ. ಅನ್ಯ ಭಾಷೆಗಳನ್ನು ಅನ್ನದ ಭಾಷೆಯಾಗಿಸಿಕೊಂಡರು ನಮ್ಮ ಭಾಷೆಯನ್ನು ಹೃದಯದ ಭಾಷೆಯಾಗಿ ಉಳಿಸಿಕೊಂಡು ಭಾಷೆ ಹಾಗೂ ರಾಜ್ಯ ಪರಂಪರೆಯನ್ನು ಎತ್ತರದ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಗಾಯಕ ರವಿ ಬರಾಡಿ, ಶ್ರೀಮಂತ ಬೂದಿಹಾಳ ಕನ್ನಡಪರ ಗೀತೆಗಳನ್ನು ಹಾಡಿದರು. ಸ್ನೇಹಾ ಕ್ಷತ್ರಿ ಪ್ರಾರ್ಥಿಸಿದಳು, ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸಿದರು.

