ಅಥಣಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆ
ಉದಯರಶ್ಮಿ ದಿನಪತ್ರಿಕೆ
ಅಥಣಿ: ಮಹರ್ಷಿ ವಾಲ್ಮೀಕಿ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಇಡೀ ಮಾನವಕುಲಕ್ಕೆ ದಾರಿದೀಪವಾಗಿರುವ ಮಹಾನ್ ಋಷಿಯಾಗಿದ್ದು, ರತ್ನಾಕರನಿಂದ ಮಹರ್ಷಿ ವಾಲ್ಮೀಕಿಯಾಗುವವರೆಗಿನ ಅವರ ಜೀವನ ಪಯಣ ಪ್ರತಿಯೊಬ್ಬರಿಗೂ ಪ್ರೇರಣೆ ಮತ್ತು ಆದರ್ಶವಾಗಿದೆ ಎಂದು ಅಥಣಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ ಹೇಳಿದರು.
ಅಥಣಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ವಾಲ್ಮೀಕಿ ಜಯಂತಿ ಕೇವಲ ಒಂದು ಸಮುದಾಯ ಅಥವಾ ಜಾತಿಯ ಆಚರಣೆಯಲ್ಲ. ಇದು ಸಾಹಿತ್ಯ, ಸಂಸ್ಕೃತಿ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳ ಹಬ್ಬವಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಶಿಂಗೆ ಹಾಗೂ ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಸಾಹಿತ್ಯ ಮತ್ತು ಆದರ್ಶಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಯುವಜನತೆ ದುಶ್ಚಟಗಳಿಂದ ದೂರವಿದ್ದು, ಶಿಕ್ಷಣ ಸಂಸ್ಕಾರ ಹಾಗೂ ಉತ್ತಮ ಚಿಂತನೆಗಳತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಟಿ.ಎಸ್.ಒಂಟಗುಡಿ ವಾಲ್ಮೀಕಿಯವರ ಕುರಿತು ಉಪನ್ಯಾಸ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶುರಾಮ ಪತ್ತಾರ ಸ್ವಾಗತಿಸಿದರು. ಸಂಗಮೇಶ ಹಚಡದ ಅತಿಥಿ ಉಪನ್ಯಾಸ ನೀಡಿದರು. ಒಗೆಪ್ಪ ಆರ್ಟಾಳ ವಂದಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಉಪತಹಸೀಲ್ದಾರ್ ಮಹಾದೇವ ಬಿರಾದಾರ, ಸಿದ್ಧಾರ್ಥ ಶಿಂಗೆ, ಬಸವರಾಜ ನಾಯಿಕ, ಮಲ್ಲಿಕಾರ್ಜುನ ಮಗದುಮ್, ಎಂ ಆರ್ ಮುಂಜಿ, ರಾಮಗೊಂಡ ಪಾಟೀಲ, ವೆಂಕಟೇಶ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಬಾಕ್ಸ್
ಸಮಾಜದ ಮುಖಂಡರಿಂದ ಅಸಮಾಧಾನ
ಕಾರ್ಯಕ್ರಮದ ವೇದಿಕೆಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರಿಗೆ ಸೂಕ್ತ ಸ್ಥಾನ ಕಲ್ಪಿಸಿಲ್ಲ ಎಂಬ ವಿಚಾರವಾಗಿ ಸಮಾಜದ ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶುರಾಮ ಪತ್ತಾರ ಅವರೊಂದಿಗೆ ಮುಖಂಡರು ವಾಗ್ವಾದ ನಡೆಸಿ, ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಕಾರ್ಯಕ್ರಮದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಮುಂದಿನ ದಿನಗಳಲ್ಲಿ ಇಂತಹ ಸಮುದಾಯದ ಪ್ರಮುಖ ಕಾರ್ಯಕ್ರಮಗಳಲ್ಲಿ ಸಮಾಜದ ಮುಖಂಡರು, ಗಣ್ಯರು ಹಾಗೂ ಸಂಘಟನೆಗಳ ಪ್ರತಿನಿಧಿಗಳಿಗೆ ಸೂಕ್ತ ಗೌರವ ಮತ್ತು ವೇದಿಕೆಯಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.

