ನಿರ್ಭೀತ, ಸಮಾಜಮುಖಿ ಪತ್ರಕರ್ತ ಹಾಗೂ ನ್ಯಾಯವಾದಿ ಚೇತನ ಶಿವಶಿಂಪಿ ಅವರಿಗೆ ‘ಮಾಧ್ಯಮ ರತ್ನ’ ಪುರಸ್ಕಾರ.
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಯಾವುದೇ ಲಾಭಿ ಇಲ್ಲದೆ, ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ, ಸತ್ಯಕ್ಕೆ ತಲೆಬಾಗಿ, ನ್ಯಾಯದ ಬೆನ್ನಟ್ಟಿ, ಜನಸಾಮಾನ್ಯರ ದನಿಯಾಗಿ ಸದಾ ಮುಂಚೂಣಿಯಲ್ಲಿರುವ ಉದಯರಶ್ಮಿ ಪತ್ರಿಕೆಯ ವರದಿಗಾರ ಹಾಗೂ ನ್ಯಾಯವಾದಿ ಚೇತನ ಶಿವಶಿಂಪಿ ಅವರಿಗೆ ಮತ್ತೊಂದು ಹೆಮ್ಮೆಯ ಗರಿ ಲಭಿಸಿದೆ.
ತಮ್ಮ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ, ಭ್ರಷ್ಟಾಚಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತ ಹಾಗೂ ನಿಷ್ಪಕ್ಷಪಾತ ವರದಿಗಾರಿಕೆಯ ಮೂಲಕ ಜನಮನ್ನಣೆ ಗಳಿಸಿರುವ ಇವರಿಗೆ ಕರ್ನಾಟಕ ಮಾಧ್ಯಮ ಒಕ್ಕೂಟದ ವತಿಯಿಂದ ೨೦೨೬ನೇ ಸಾಲಿನ ವಾರ್ಷಿಕ ‘ಮಾಧ್ಯಮ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಾನೂನು ಮತ್ತು ಲೇಖನಿಯ ಅಪರೂಪದ ಸಮನ್ವಯ
ಕೇವಲ ಪತ್ರಕರ್ತರಷ್ಟೇ ಅಲ್ಲದೆ ಸಕ್ರಿಯ ವಕೀಲರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು, ಬಡವರಿಗೆ ಮತ್ತು ಅಸಹಾಯಕರಿಗೆ ಸಂಪೂರ್ಣ ಉಚಿತ ಕಾನೂನು ನೆರವು ಒದಗಿಸಿ ನ್ಯಾಯ ದೊರಕಿಸಿಕೊಡುವಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ.
ಸಮಾಜಮುಖಿ ಬದ್ಧತೆ:
ಮಾಧ್ಯಮದ ಲೇಖನಿ ಮತ್ತು ಕಾನೂನಿನ ಪವಿತ್ರ ಶಕ್ತಿಯನ್ನು ಜೋಡಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡುತ್ತಿರುವ ಇವರ ನಿಸ್ವಾರ್ಥ ಜನ ಸೇವೆ ಇಡೀ ಪತ್ರಿಕಾರಂಗಕ್ಕೆ ಮಾದರಿಯಾಗಿದೆ.
ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ:
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ವಿಜಯ ಮಹಾಂತೇಶ ಮಂಗಳ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು.
ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ. ಗುರು ಚನ್ನವೀರ ಶಿವಾಚಾರ್ಯರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಇದೇ ಸಮಾರಂಭದಲ್ಲಿ ಮಾಧ್ಯಮ ರಂಗದ ಸಾಧನೆಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಯ ಮುಖ್ಯ ನಿರೂಪಕಿ ಶ್ವೇತಾ ಆಚಾರ್ಯ ಅವರಿಗೂ ‘ಮಾಧ್ಯಮ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಶಾಸಕ ಸಿ.ಎಸ್.ನಾಡಗೌಡ, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಭಾಜಪಾ ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಬಾಲಾಜಿ ಶುಗರ್ಸ ನ ರಾಹುಲಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ತಾರನಾಳ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ, ಗೌರವಾಧ್ಯಕ್ಷ ಜಿ.ಟಿ.ಘೋರ್ಪಡೆ, ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳ ಅಧ್ಯಕ್ಷರುಗಳಾದ ಪರಶುರಾಮ ಕೊಣ್ಣೂರ ಹಾಗೂ ಅಂಬಾಜಿ ಘೋರ್ಪಡೆ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಚೇತನ ಶಿವಶಿಂಪಿ ಅವರ ನಿಸ್ವಾರ್ಥ ಸೇವೆ ಹಾಗೂ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಬಾಕ್ಸ್:
ದಿಟ್ಟ ವರದಿಗಾರಿಕೆ
ಸಮಾಜದ ಅಂಕುಡೊಂಕುಗಳು ಮತ್ತು ಅನ್ಯಾಯಗಳ ವಿರುದ್ಧ ನಿರ್ಭಯವಾಗಿ ನಡೆಸಿದ ಇವರ ದಿಟ್ಟ ವರದಿಗಳಿಗೆ ಸ್ವತಃ ಜಿಲ್ಲಾಡಳಿತವೇ ಎಚ್ಚೆತ್ತುಕೊಂಡು, ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ ಹಲವು ನಿದರ್ಶನಗಳಿವೆ.

“ಎಂತಹದ್ದೇ ಕಠಿಣ ಪರಿಸ್ಥಿತಿಗಳು ಎದುರಾದರೂ ಯಾರಿಗೂ ಬಗ್ಗದೆ, ಜಗ್ಗದೆ ಪತ್ರಿಕೆಯ ಆರಂಭದಿಂದಲೂ ಸದಾ ಸಮಾಜಮುಖಿ ಲೇಖನಗಳು ಹಾಗೂ ದಿಟ್ಟ ವರದಿಗಳನ್ನು ನೀಡುತ್ತಾ ಬಂದಿರುವ ಚೇತನ ಶಿವಶಿಂಪಿ ಅವರ ಬದ್ಧತೆ ಅನನ್ಯ. ಇಂದಿನ ಸಮಾಜಕ್ಕೆ ಇಂತಹ ನಿರ್ಭೀತ ಹಾಗೂ ನಿಸ್ವಾರ್ಥ ಪತ್ರಕರ್ತರ ಅಗತ್ಯವಿದೆ. ಇಂತಹ ಸತ್ಯನಿಷ್ಠ, ಜನಪರ ವ್ಯಕ್ತಿ ನಮ್ಮ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಪತ್ರಿಕೆಯ ಗೌರವ ಮತ್ತು ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹೆಚ್ಚಿಸಿದೆ.”
– ಇಂದುಶೇಖರ ಮಣೂರ
ಸಂಪಾದಕರು, ’ಉದಯರಶ್ಮಿ’ ದಿನಪತ್ರಿಕೆ

