ಹೊಲದಲ್ಲಿ ಪಂಚ ಪಾಂಡವರ ಪೂಜೆ | ಬರಗಾಲದ ನಿಮಿತ್ತ ಈ ಬಾರಿ ಕಾರ್ಮೋಡ ಕವಿದ ಶೀಗಿಹುಣ್ಣಿಮೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ದಸರಾ ಹಬ್ಬ ಮುಗಿಯುತ್ತಿದ್ದಂತೆ ಬರುವ ಹಬ್ಬವೇ ಶೀಗೆ ಹುಣ್ಣಿಮೆ. ಇದು ಇಡೀ ರೈತ ಸಮೂಹದಲ್ಲಿ ಒಂದು ವಿಶಿಷ್ಟ ಸ್ಥಾನ ಹೊಂದಿದೆ. ಸೋಮವಾರದಂದು ರೈತರು ಸಂಭ್ರಮದಿಂದ ಹುಣ್ಣಿಮೆಯನ್ನು ಆಚರಿಸಿದರು.
ಹೊಲದ ಸುತ್ತಲೂ ಚರಗ ಚೆಲ್ಲಿ ಹೊಲದಲ್ಲಿ ಐದು ಕಲ್ಲುಗಳನ್ನು ಇಟ್ಟು ಅವುಗಳಿಗೆ ಕುಂಕುಮ, ಅರಿಶೀಣ ಹಚ್ಚಿ, ಪಾಂಡವರು ಎಂದು ಪೂಜಿಸಲಾಗುತ್ತದೆ. ನಂತರ ಭೂತಾಯಿಗೆ ವಿವಿಧ ಪದಾರ್ಥಗಳ ನೈವೇದ್ಯ ಸಲ್ಲಿಸುವುದರ ಮೂಲಕ ಚರಗವನ್ನು ಚೆಲ್ಲುತ್ತಾ ಹುಣ್ಣಿಮೆ ಆಚರಿಸಿದರು.
ಈ ವರ್ಷ ಬರಗಾಲದ ನಿಮಿತ್ತ ಎಲ್ಲ ಬೆಳೆಗಳು ಒಣಗಿ ಹೋಗುತ್ತಿವೆ. ರೈತರ ಬಾಯಿಗೆ ಬಂದ ತುತ್ತು ಬಾಯಿಗೆ ಬಾರದ್ದರಿಂದ ಈ ಬಾರಿ ಶೀಗಿಹುಣ್ಣಿಮೆಯು ರೈತರಿಗೆ ಕಾರ್ಮೋಡ ಕವಿದಂತಾಗಿದೆ.
ರೈತರು ಮತ್ತು ಕೃಷಿ ಮಹಿಳೆಯರು ಭೂತಾಯಿಯ ಪೂಜೆಯನ್ನು ಮಾಡಿದರು. ಹೊಲದಲ್ಲಿ ಕಲ್ಲಿನ ಪಂಚಪಾಂಡವರನ್ನು ಪೂಜಿಸಿ ನೈವೇದ್ಯ ಅರ್ಪಿಸಿದರು. ನಂತರ ಒಬ್ಬರು ನೈವೇದ್ಯದ ತಾಟು ಇನ್ನೊಬ್ಬರು ನೀರನ್ನು ಹಿಡಿದುಕೊಂಡು ಹೊಲದ ತುಂಬೆಲ್ಲ ಸಾಗುತ್ತ ಚರಗ ಚೆಲ್ಲುವರು. ಭೂತಾಯಿಗೆ ನೈವೇದ್ಯ ಚೆಲ್ಲುತ್ತ ಸಜ್ಜೆ ರೊಟ್ಟಿ, ಚೌಳಿಕಾಯಿ ಚೇಂಗ ಭಲೋ ಎಂದು ಹೇಳುತ್ತ ಇಡೀ ಹೊಲವನ್ನು ಸುತ್ತು ಹಾಕಿದರು.
ಕೃಷಿಕ ಮಹಿಳೆಯರು ಜೋಳದ ಮತ್ತು ಸಜ್ಜೆ ರೊಟ್ಟಿ, ಪುಂಡಿ ಪಲ್ಲೆ, ಕುಂಬಳಕಾಯಿ, ಕಡಬು, ಹೋಳಿಗೆ ವಿವಿಧ ಚಟ್ನಿಗಳು, ಸಿಹಿ ತಿನಿಸುಗಳನ್ನು ತಯಾರಿಸಿ ದೊಡ್ಡದಾದ ಎಣ್ಣೆಯ ಬುಟ್ಟಿಯಲ್ಲಿ ಚರಗದ ಬುತ್ತಿಯನ್ನು ಭರ್ತಿಮಾಡಿ ಬಿಳಿ ಬಟ್ಟೆಯಲ್ಲಿ ಸುತ್ತಲಾಗಿತ್ತು. ಚರಗ ಚೆಲ್ಲಿದ ನಂತರ ಕುಟುಂಬದವರು, ನೆರೆಹೊರೆಯವರು ಮತ್ತು ಸ್ನೇಹಿತರು ಸಾಮೂಹಿಕವಾಗಿ ಊಟ ಸವಿದರು.
ಮಾಜಿ ಗ್ರಾಪಂ ಸದಸ್ಯ ಲಕ್ಷ್ಮೀಬಾಯಿ ಮಾಳಿಯವರು ಮಾತನಾಡುತ್ತ. ಇದೊಂದು ಜೈವಿಕ ಕೀಟ ಹತೋಟಿ ವಿಧಾನ ಕೂಡ ಆಗಿದೆ. ಚರಗದಿಂದ ಹೊಲದಲ್ಲಿ ಚೆಲ್ಲಿದ ಆಹಾರ ಪದಾರ್ಥಗಳನ್ನು ತಿನ್ನಲು ಪಕ್ಷಿಗಳು ಸಹಜವಾಗಿ ಆಕರ್ಷಿತವಾಗುವವು. ಆಗ ಪಕ್ಷಿಗಳಿಗೆ ಬೆಳೆಯನ್ನು ಬಾಧಿಸುವ ಕೀಟಗಳ ವಾಸನೆ ಬರುತ್ತದೆ. ಹೀಗಾಗಿ ಪಕ್ಷಿಗಳು ಕೀಟವನ್ನು ತಿಂದು ತೇಗುತ್ತವೆ. ಯಾವುದೇ ಖರ್ಚಿಲ್ಲದೇ, ವಿಷ ಸಿಂಪಡಿಸದೆ ಕೀಟಗಳ ನಿಯಂತ್ರಣ ಮಾಡುವ ವಿಧಾನ ಇದಾಗಿದೆ ಎಂದರು.

