ಸಿಂದಗಿ: ನೆಲೆ ಪ್ರಕಾಶನ ಸಂಸ್ಥೆಯ ಅಡಿಯಲ್ಲಿ ಸ್ಥಾಪಿತವಾಗಿರುವ ಎಂ.ಎಂ. ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಜಾನಪದ ವಿದ್ವಾಂಸರಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶಾಂತಿ ನಾಯಕ ಅವರಿಗೆ ೨೦೨೩ನೆಯ ಸಾಲಿನ ದೇಸಿ ಸನ್ಮಾನ ಪ್ರಶಸ್ತಿ ಜೊತೆಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ ಡಾ.ಚನ್ನಪ್ಪ ಕಟ್ಟಿ ತಿಳಿಸಿದ್ದಾರೆ.
ಶಾಂತಿ ನಾಯಕ ಅವರಿಗೆ ೨೦೨೩ನೆಯ ಸಾಲಿನ ದೇಸಿ ಸನ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ನ. ೫ರಂದು ಭಾನುವಾರ ಬೆಳಿಗ್ಗೆ ೧೦:೩೦ಗಂಟೆಗೆ ನಗರದ ಹೊರವಲಯದ ವಿದ್ಯಾಗಿರಿಯ ಜೇವರಗಿ ರಸ್ತೆಯಲ್ಲಿರುವ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್‌ನ ಆವರಣದಲ್ಲಿ ಜರುಗಲಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿಕೊಳ್ಳಲಿದ್ದಾರೆ. ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್‌ನ ಅಧ್ಯಕ್ಷ ವಿಠ್ಠಲ ಕೋಳ್ಳೂರ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಂತಿ ನಾಯಕ ಬದುಕು-ಬರಹ ಕೃತಿ ಬಿಡುಗಡೆಯನ್ನು ಶಾಸಕ ಅಶೋಕ ಮನಗೂಳಿ ನೆರವೇರಿಸಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಡಾ.ಜೆ.ಜಿ.ಜೋಶಿ ಕೃತಿ ಪರಿಚಯ ಮಾಡಲಿದ್ದಾರೆ. ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಹಿರಿಯ ವಿದ್ವಾಂಸರಾದ ಶಾಂತಿ ನಾಯಕರಿಗೆ ೨೦೨೩ನೆಯ ಸಾಲಿನ ದೇಸಿ ಸನ್ಮಾನ ಪ್ರಶಸ್ತಿಯನ್ನು ಹಿರಿಯ ವಿಮರ್ಶಕರಾದ ಡಾ.ರಾಮಕೃಷ್ಣ ಮರಾಠೆ, ಡಾ.ವಿಜಯಕುಮಾರ ಕಟಗಿಹಳ್ಳಿಮಠ ಹಾಗೂ ಡಾ.ಎಫ್.ಟಿ ಹಳ್ಳಿಕೇರಿ ಕೂಡಿಗೊಂಡು ಜಾನಪದ ಸಾಹಿತ್ಯದಲ್ಲಿ ಅವರ ಅಪಾರ ಸೇವೆಯನ್ನು ಮಾಡಿದ ಹೊನ್ನಾವರದ ಶಾಂತಿ ನಾಯಕ ಅವರನ್ನು ೨೦೨೩ನೆಯ ಸಾಲಿನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಪ್ರತಿಷ್ಠಾನದ ಸಂಚಾಲಕ ಡಾ.ಚನ್ನಪ್ಪ ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಶಾಂತಿ ನಾಯಕ ಅವರ ಹಿನ್ನಲೆ*
ಶಾಂತಿ ನಾಯಕ ಅವರು ಪ್ರೌಢಶಾಲಾ ಶಿಕ್ಕರಾಗಿ ಸೇವೆ ಸಲ್ಲಿಸುತ್ತ ಜಾನಪದಕ್ಕೆ ಸಂಬಂಧಿಸಿದ ೪೮ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಅರ್ಧ ದಶಕಕ್ಕೂ ಮಿಕ್ಕಿ ಅವರು ನಡೆಸಿದ ಕ್ಷೇತ್ರಕಾರ್ಯ ಆಧಾರಿತ ಕೃತಿಗಳಿವೆ. ಶಾಂತಿ ನಾಯಕ ಅವರಿಗೆ ಇದೀಗ ೮೦ವರ್ಷ.
*ಪ್ರಮುಖ ಗ್ರಂಥಗಳು:* ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು, ಹವ್ಯಕರ ಕಥೆಗಳು, ಜಾಣೆ ಕನ್ನಡವ ತಿಳಿದ್ಹೇಳೆ, ಜನಪದ ವೈದ್ಯಕೀಯ ಅಡುಗೆಗಳು, ಕಾಡಿನ ಆಹಾರ ಬೆಳೆ, ಸ್ತ್ರೀ ಸಂವೇದನೆ-ವಿಮರ್ಶೆ, ಜೀವ ಉಳಿಸುವ ಕಳೆಗಳು ಇವರ ಪ್ರಮುಖ ಗ್ರಂಥಗಳಾಗಿವೆ.
*ಸಣ್ಣ ಸಾಲ ಯೋಜನೆ:* ಇವರು ಸಮತಾ ಮಹಿಳಾ ಪತ್ತಿನ ಸಹಕಾರಿ ಸಂಘವನ್ನು ಸ್ಥಾಪಿಸಿ ಆರ್ಥಿಕ ಸಬಲತೆಗೆ ಶ್ರಮಿಸಿದ್ದಾರೆ. ದಂಡದ ಬಡ್ಡಿಗೆ ಅನುವು ಇಲ್ಲದ ಸಣ್ಣ ಸಾಲ ಯೋಜನೆ ಇಲ್ಲಿ ಜನ ಮೆಚ್ಚುಗೆ ಪಡೆದಿದೆ. ಭೂಮಿ ಮಹಿಳಾ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ತಾಲೂಕಿನಲ್ಲಿ ಯುನಿಟಿ ಮಹಿಳಾ ಸಹಕಾರಿ ಸಂಘ ಪ್ರಥಮ ಸಹಕಾರಿ ಸಂಘವನ್ನು ಸ್ಥಾಪಿಸಲು ಪೂರ್ಣ ನೆರವು ನೀಡಿದ್ದಾರೆ.
*ಲಭಿಸಿದ ಪ್ರಶಸ್ತಿಗಳು:* ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಮಲ್ಲಿಕಾ ಪ್ರಶಸ್ತಿ, ಪದ್ಮಭೂಷಣ ಡಾ.ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.

