ಜನತಾ ದರ್ಶನದ ಮೂಲಕ ಸಮಸ್ಯೆಗಳಿಗೆ ಪರಿಹಾರ | ನೀರಿನ ಸಮಸ್ಯೆ ನಿವಾರಣೆಯಲ್ಲಿ ಲೋಪವಾದರೆ ಅಧಿಕಾರಿಗಳ ಮೇಲೆ ಕ್ರಮ
ಬರ: ಕುಡಿವ ನೀರು ಪೂರೈಕೆಗೆ ಪ್ರಥಮಾದ್ಯತೆ
ವಿಜಯಪುರ: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವ ಹಿನ್ನಲೆಯಲ್ಲಿ ಕುಡಿಯುವ ನೀರಿಗೆ ಪ್ರಥಮಾದ್ಯತೆ ನೀಡಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಗಂಭೀರವಾಗಿ ತೆಗೆದುಕೊಳ್ಳಬೇಕು. ನೀರಿನ ವಿಷಯದಲ್ಲಿ ಯಾವುದೇ ನೆಪ ಸಹಿಸುವುದಿಲ್ಲ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಲ್ಲಿ ಲೋಪ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಕ್ರಮ ವಹಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗುರುವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ನೀರಿನ ಸಮಸ್ಯೆವಿದ್ದೆಡೆ ಬೊರವೆಲ್‌ಗಳನ್ನು ಕೊರೆಯಿಸಲು ಕ್ರಮ ವಹಿಸಬೇಕು. ಬೊರವೆಲ್ ಕೊರೆಸುವ ಪ್ರಕ್ರಿಯೆ ವಿಳಂಬವಾಗುತ್ತಿದ್ದರೆ, ತ್ವರಿತವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ವಹಿಸಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಗ್ರಾಮೀಣ ಭಾಗದಲ್ಲಿ ತಾಲೂಕಾ ಮಟ್ಟದ ಟಾಸ್ಕಪೋರ್ಸ್ ಸಭೆ ನಡೆಸಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಬರಗಾಲದಂತಹ ಕ್ಲೀಷ್ಟಕರ ಪರಿಸ್ಥಿತಿಯಲ್ಲಿ ಜನರಿಗೆ ಕುಡಿಯುವ ನೀರು, ವಿದ್ಯುತ್, ಉದ್ಯೋಗದ ಕೊರತೆಯಾಗದಂತೆ ನಿಗಾ ವಹಿಸಬೇಕು. ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು. ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಡಿ ಸ್ಥಳೀಯವಾಗಿ ಕೆಲಸ ಒದಗಿಸುವ ಮೂಲಕ ಜನರ ಬದುಕಿಗೆ ಆಸರೆ ಒದಗಿಸಬೇಕು ಎಂದು ಹೇಳಿದರು.
ಈ ಬರಗಾಲದ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು. ಜನತಾ ದರ್ಶನ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕು. ಜನರ ಕುಂದು ಕೊರತೆಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ, ಪರಿಹಾರ ಒದಗಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪೂರ್ವಸಿದ್ಧತೆ ಮಾಡಿಕೊಂಡಿರಬೇಕು. ಈ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಗ್ರಾಮೀಣ ಮಟ್ಟದ ಜನರ ಸಮಸ್ಯೆಗಳ ಆಲಿಕೆಗೆ ತಾಲೂಕಾ ಮಟ್ಟದಲ್ಲಿ ಪ್ರತಿ ೧೫ ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಸ್ಥಳೀಯ ಶಾಸಕರೊಂದಿಗೆ ಜನತಾ ದರ್ಶನ ಏರ್ಪಡಿಸಬೇಕು. ಇದರಿಂದ ಸಾಕಷ್ಟು ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಜನರ ಸಮಸ್ಯೆಗೆ ಪರಿಹಾರ ದೊರೆತಾಗ ಜನತಾದರ್ಶನ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ,ಸೆಪ್ಟಂಬರ್ ೨೫ ರಂದು ನಡೆದ ಮೊದಲನೇ ಜನತಾ ದರ್ಶನ ಕಾರ್ಯಕ್ರಮದಲ್ಲಿ ೭೦೯ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ ೫೬೩ ಅರ್ಜಿಗಳನ್ನು ಒಂದು ತಿಂಗಳೊಳಗಾಗಿ ವಿಲೇವಾರಿ ಮಾಡಲಾಗಿದೆ. ೧೪೦ ಅರ್ಜಿಗಳಿಗೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿ ಬಾಕಿ ಇದ್ದು, ಶೀಘ್ರದಲ್ಲೇ ಇತ್ಯರ್ಥಗೊಳ್ಳಲಿವೆ. ಈ ಅರ್ಜಿಗಳಿಗೆ ಸಂಬಧಿಸಿದಂತೆ ೧೭೭ ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಈ ಅರ್ಜಿಗಳ ಪೈಕಿ ೧೪೫ ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪೋಲಿಸ್ ಇಲಾಖೆ, ಹೆಸ್ಕಾಂ ಇಲಾಖೆಯ ಹೆಚ್ಚಿನ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಬಾಕಿ ಅರ್ಜಿಗಳ ವಿಲೇವಾರಿಗಾಗಿ ಸಂಬಂಧಿಸಿದ ಇಲಾಖೆಗಳೊಂದಿಗೆ ಸಭೆ ನಡೆಸಿ ಪರಿಶೀಲನೆ ಮಾಡಿ ಆದ್ಯತಾನುಸಾರ ವಿಲೇವಾರಿಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾದ ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆ, ಬೆಳೆ ಹಾನಿ, ವಿಕಲಚೇತರನಿಗೆ ಆಶ್ರಯ ಮನೆ, ಕೃಷಿ ಹೊಂಡ ನಿರ್ಮಾಣ, ಭೂದಾಖಲೆಗಳ ಸಮಸ್ಯೆ, ಕಾಲುವೆಗೆ ನೀರು ಹರಿಸುವಿಕೆ, ವಿದ್ಯುತ್, ಬಸ್ಸಿನ ವ್ಯವಸ್ಥೆ, ಕಂದಾಯ ಇಲಾಖೆಗೆ ಸಂಬಂಧಿಸಿದ ದೂರುಗಳು, ಆಸ್ತಿ ನೊಂದಣಿ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿದ ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿ, ಪರಿಹಾರಕ್ಕೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲ್ಲಶೆಟ್ಟಿ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
*ಜನತಾ ದರ್ಶನದಲ್ಲಿ ೬೨೮ ಅರ್ಜಿಗಳ ಸ್ವೀಕಾರ*
ವಿಜಯಪುರ: ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ೩೧೦ ಅರ್ಜಿಗಳು ಸೇರಿದಂತೆ ಒಟ್ಟು ೬೨೮ ಅರ್ಜಿಗಳು ಸ್ವೀಕೃತವಾಗಿವೆ.
ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ಅರ್ಜಿಗಳ ಇಲಾಖಾವಾರು ವಿವರದಂತೆ ಕಂದಾಯ ಇಲಾಖೆಯ ೩೧೦, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ -೦೪, ಆಲಮಟ್ಟಿ ವಿಶೇಷ ಭೂಸ್ವಾಧೀನಾಧಿಕಾರಿ-೦೯, ಕೆಬಿಜೆಎನ್‌ಎಲ್ ಆಲಮಟ್ಟಿ-೧೦, ಆಲಮಟ್ಟಿ ಪುನರ್‌ವಸತಿ (ಆರ್.ಓ)-೦೮, ಮಹಾನಗರ ಪಾಲಿಕೆ ೭೪, ನೀರು ಸರಬರಾಜು ಮಂಡಳಿ-೧೪, ನಗರಾಭಿವೃದ್ದಿ ಪ್ರಾಧಿಕಾರ-೦೨, ಹೆಸ್ಕಾಂ-೨೩, ನಗರಾಭಿವೃದ್ದಿ ಕೋಶ-೦೮, ಕೊಳಚೆ ನಿರ್ಮೂಲನಾ ಮಂಡಳಿ-೦೫, ಜಿಲ್ಲಾ ಪಂಚಾಯತ್-೫೮, ಸಮಾಜ ಕಲ್ಯಾಣ ಇಲಾಖೆ -೦೩, ಹಿಂದುಳಿದ ವರ್ಗಗಳ ಇಲಾಖೆ-೦೭, ಅಲ್ಪಸಂಖ್ಯಾತರ ಇಲಾಖೆ -೦೨, ಶಿಶು ಅಭಿವೃದ್ದಿ ಯೋಜನಾಧಿಕಾರಿ-೦೧, ಶಿಕ್ಷಣ ಇಲಾಖೆ-೨೦, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ-೦೫, ಕೃಷಿ ಇಲಾಖೆ-೦೬, ತೋಟಗಾರಿಕೆ-ರೇಷ್ಮೆ-೦೨, ಆರೋಗ್ಯ ಇಲಾಖೆ-೧೩, ಕಾರ್ಮಿಕ ಇಲಾಖೆ-೦೧, ಸಣ್ಣ ನೀರಾವರಿ-೦೯, ಕೆಕೆಆರ್‌ಟಿಸಿ-೦೯, ಪಶುಸಂಗೋಪನಾ ಇಲಾಖೆ-೦೧, ಹೌಸಿಂಗ್ ಬೋರ್ಡ್-೦೧, ಪೋಲಿಸ್ ಇಲಾಖೆ-೧೬, ಅಗ್ನಿಶಾಮಕ ಇಲಾಖೆ-೦೧, ಅಬಕಾರಿ ಇಲಾಖೆ-೦೧, ಹಿರಿಯ ನಾಗರೀಕರ ಸಬಲೀಕರಣ ಇಲಾಖೆ-೦೪ ಹಾಗೂ ಸಹಕಾರ ಇಲಾಖೆ -೦೧ ಸೇರಿದಂತೆ ಒಟ್ಟು ವಿವಿಧ ಇಲಾಖೆಯ ೬೨೮ ಅರ್ಜಿಗಳು ಸ್ವೀಕೃತವಾಗಿವೆ.


