ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ೨೦೨೬ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ ೨೦೨೫ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭವನ್ನು ಅ.೨೨ರಂದು ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಆಯೋಜಿಸಲಾಗಿದೆ ಎಂದು ಪ್ರಾಧಿಕಾರದ ಸದಸ್ಯ ಸಂಚಾಲಕ ಎಸ್. ಗಂಗಾಧರಯ್ಯ ಅವರು ತಿಳಿಸಿದರು.
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರವು ಪ್ರತಿವರ್ಷ ಅನುವಾದ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಸಾಹಿತಿಗಳು ಹಾಗೂ ಅನುವಾದಕರನ್ನು ಗುರುತಿಸಿ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಗಳನ್ನು ನೀಡುತ್ತಾ ಬಂದಿದೆ. ಅದರಂತೆ ಈ ಬಾರಿಯೂ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
೨೦೨೬ನೇ ಸಾಲಿನ ಗೌರವ ಪ್ರಶಸ್ತಿಗೆ ಡಾ. ಸೂರ್ಯಕಾಂತ್ ಎಸ್. ಸೂಜ್ಯಾತ್, ಡಾ. ಮಲರ್ ವಿಳಿ ಕೆ., ಡಾ. ಬಂಜಗೆರೆ ಜಯಪ್ರಕಾಶ, ಪ್ರೊ. ಸಿ. ನಾಗಣ್ಣ ಹಾಗೂ ಡಾ. ಕೇಶವ ಶರ್ಮ ಕೆ. ಅವರು ಆಯ್ಕೆಯಾಗಿದ್ದಾರೆ.
೨೦೨೫ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಡಾ. ಕೆ. ಶ್ರೀನಾಥ, ಡಾ. ಪ್ರಮೋದ್ ಮುತಾಲಿಕ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಕನಕರಾಜ ಆರನಕಟ್ಟೆ, ಅಶೋಕ ಕುಮಾರ ಎಂ. ಹಾಗೂ ಚಂದ್ರಶೇಖರ ಮದಭಾವಿ ಅವರು ಆಯ್ಕೆಯಾಗಿದ್ದು, ಎಂದು ತಿಳಿಸಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಅನುವಾದ ಸಾಹಿತ್ಯದ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡುತ್ತಿದೆ. ಪ್ರತಿವರ್ಷ ಹೊಸ ಅನುವಾದಕರಿಗೆ ಅವಕಾಶ ಕಲ್ಪಿಸುವ ಮೂಲಕ ವಿವಿಧ ಭಾಷೆಗಳಲ್ಲಿನ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಲು ಪ್ರೋತ್ಸಾಹಿಸಲಾಗುತ್ತಿದೆ. ಮೌಲ್ಯಯುತ ಬರಹಗಳನ್ನು ರಚಿಸುವ ಹಿರಿಯ ಮತ್ತು ಕಿರಿಯ ಸಾಹಿತಿಗಳನ್ನು ಗುರುತಿಸಿ ಅವರನ್ನು, ಪ್ರೋತ್ಸಾಹಿಸುವ ಉದ್ದೇಶದಿಂದ ನಗದು ಬಹುಮಾನವನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.
ಅಂದು ಅ.೨೨ ರಂದು ಸಮಾರಂಭವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಅವರು ಉದ್ಘಾಟಿಸಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲ ಅವರು ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ವಿತರಿಸಲಿದ್ದಾರೆ. ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ರಿಜಿಸ್ಟ್ರಾರ್ ದತ್ತಪ್ಪ ಸಾಗನೂರ, ಉಪಸ್ಥಿತರಿದ್ದರು.

