ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಪ್ರತಿ ಟನ್ ಕಬ್ಬಿಗೆ ೫,೫೦೦ ರೂ. ಬೆಂಬಲ ಬೆಲೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬುಧವಾರವೂ ತಾಲೂಕಿನ ಯಲಗೂರ ಕ್ರಾಸ್ ಬಳಿ ಎನ್ಎಚ್-೫೦ ರಲ್ಲಿ ಪ್ರತಿಭಟನೆ ಮುಂದುವರೆಯಿತು.
ಬುಧವಾರ ಬೆಳಗ್ಗೆಯಿಂದ ಹೆದ್ದಾರಿಯ ಒಂದು ಬದಿಯಲ್ಲಿ ನೂರಾರು ರೈತರು ಜಮಾಯಿಸಿದ್ದರು. ಸಂಜೆ ೪ರ ನಂತರ ರಸ್ತೆಯ ಮಧ್ಯದಲ್ಲೇ ಕುಳಿತು ಧರಣಿ ನಡೆಸಿದರು. ಕೆಲ ರೈತರು ರಸ್ತೆಯಲ್ಲೇ ಮಲಗಿ ವಾಹನ ಸಂಚಾರ ತಡೆದರು.
ಹೆದ್ದಾರಿ ತಡೆಯಿಂದ ಹೊಸಪೇಟೆ ಕಡೆಗೆ ಹೋಗುವ ವಾಹನಗಳನ್ನು ಆಲಮಟ್ಟಿ ಮಾರ್ಗವಾಗಿ ಸಂಚರಿಸಲು ಅವಕಾಶ ನೀಡಲಾಯಿತು.
ನಂತರ ಡಿಸಿ ಮತ್ತು ಎಸ್ಪಿ ಜತೆ ಚರ್ಚೆ ನಡೆಸಿದ ರೈತ ಮುಖಂಡರು, ರಾಷ್ಟ್ರೀಯ ಹೆದ್ದಾರಿ ಆಲಮಟ್ಟಿ ಜಲಾಶಯದ ಸಮೀಪ ಇರುವ ಕಾರಣ ಹಾಗೂ ರಾಜ್ಯ ನಾಯಕರ ಸೂಚನೆಯ ಮೇರೆಗೆ ಹೋರಾಟದ ಸ್ವರೂಪ ಬದಲಿಸಲಾಗಿದೆ ಎಂದು ತಿಳಿಸಿದರು. ನಾಳೆ ಗುರುವಾರದಿಂದ ಬಬಲೇಶ್ವರದ ಬಾಗೇವಾಡಿಯಿಂದ ಧಾರವಾಡದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿ ಹೆದ್ದಾರಿ ತಡೆ ತೆರವುಗೊಳಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಸಾಬಣ್ಣ ಅಂಗಡಿ, ಸೀತಪ್ಪ ಗಣಿ, ಲಕ್ಷ್ಮೀ ಬಿರಾದಾರ, ಸಂಗೀತಾ ರಾಠೋಡ, ಆನಂದ ಹಡಗಲಿ, ರವಿ ಕೋತಿನ, ವಿಠ್ಠಲ ಮಸೂತಿ, ಸತೀಶ ನರಸರೆಡ್ಡಿ ಸೇರಿದಂತೆ ಇತರರು ಇದ್ದರು.

