ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ನಿಮಿತ್ತ ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ಯಾತ್ರೆಯು ಜಿಲ್ಲೆಗೆ ಬುಧವಾರ ರಾತ್ರಿ ಆಗಮಿಸಿತು.
ವಿಜಯಪುರಕ್ಕೆ ಆಗಮಿಸಿದ ವಿಜಯ ಜ್ಯೋತಿ ಯಾತ್ರೆಯ ರಥಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಪೂಜೆ ಸಲ್ಲಿಸಿ ಕಿತ್ತೂರ ರಾಣಿ ಚನ್ನಮ್ಮ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದರು.
ವೀರ ರಾಣಿ ಚನ್ನಮ್ಮ ಅವರ ಧೈರ್ಯ, ಶೌರ್ಯ ಹಾಗೂ ಬ್ರಿಟಿಷರ ವಿರುದ್ಧದ ಹೋರಾಟದ ಸ್ಫೂರ್ತಿಯನ್ನು ವಿಜಯ ಜ್ಯೋತಿ ಯಾತ್ರೆಯ ಮೂಲಕ ಜನರಿಗೆ ತಿಳಿಸಿಕೊಡುವುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ ಹೇಳಿದರು.
ವಿಜಯ ಜ್ಯೋತಿ ಯಾತ್ರೆಯ ಮೆರವಣಿಗೆಯು ವಿವಿಧ ಜಾನಪದ ಕಲಾ ತಂಡಗಳಿಂದ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡು, ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಾಗಿತು.ಬಾಗಲಕೋಟೆ ಜಿಲ್ಲೆಯಿಂದ ವಿಜಯಪುರಕ್ಕೆ ಆಗಮಿಸಿದ ವಿಜಯ ಜ್ಯೋತಿ ಯಾತ್ರೆಯು ತಿಕೋಟಾ ಮೂಲಕ ಬೆಳಗಾವಿ ಜಿಲ್ಲೆಯ ಅಥಣಿಗೆ ಬೀಳ್ಕೊಡಲಾಯಿತು. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ನಡೆಯಲಿರುವ ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುತ್ತಿರುವ ಈ ಯಾತ್ರೆಗೆ ವಿಜಯಪುರ ಜಿಲ್ಲೆಯಲ್ಲಿ ಗೌರವಪೂರ್ಣ ಸ್ವಾಗತ ಹಾಗೂ ಬೀಳ್ಕೊಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಬೈಲಹೊಂಗಲದ ನಗರ ಸಭೆ ಪೌರಾಯುಕ್ತರಾದ ಶ್ರೀಮತಿ ಭಾಗ್ಯಶ್ರೀ ಆರ್ ಹುಗ್ಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ,ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ, ಬಿ.ಎಮ್ ಪಾಟೀಲ ಎಂ. ಟಿ. ಪಾಟೀಲ, ಗುರುಶಾಂತ ನಿಡೋಣಿ, ಪ್ರೇಮಾನಂದ ಬಿರಾದಾರ, ಎಸ್ ಆರ್. ಹುಕ್ಕಣಿ, ಸುರೇಶ ಬಿರಾದಾರ, ಬಸನಗೌಡ ಪಾಟೀಲ, ಕುಮಾರಗೌಡ ಪಾಟೀಲ, ಅಡಿವೆಪ್ಪ ಸಾಲಗಲ್, ಪೀಟರ್ ಅಲೆಕ್ಸಾಂಡರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

