ರೈತರ ವಿವಿಧ ಬೇಡಿಕೆ ಈಡೇರಿಕೆಗೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕಿನ ನಾದ ಕೆಡಿ ಗ್ರಾಮದಲ್ಲಿ ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು. ಭೀಕರ ಬರಗಾಲದಿಂದ ಸಂಕಷ್ಟಕ್ಕೀಡಾದ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ತುರ್ತು ಪರಿಹಾರ ಘೋಷಿಸಬೇಕು. ನಾದ ಕೆಡಿ ಸುತ್ತಮುತ್ತಲಿನ 16 ಗ್ರಾಮಗಳಿಗೆ ಕಾಲುವೆ ಹಾಗೂ ಹಳ್ಳಗಳ ಮೂಲಕ ನೀರು ಹರಿಸಬೇಕು. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಮಳೆಯ ಕೊರತೆ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವುದು ಹಾಗೂ ನೀರಾವರಿ ಸೌಲಭ್ಯಗಳ ಅಭಾವದಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದಿರುವುದು ರೈತರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಸರ್ಕಾರ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತರ ಹಕ್ಕುಗಳ ರಕ್ಷಣೆಗಾಗಿ ಎಲ್ಲರೂ ಜಾತಿ, ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ಹೋರಾಡಬೇಕು. ರೈತರ ಒಗ್ಗಟ್ಟೇ ಹೋರಾಟದ ಶಕ್ತಿ ಎಂದು ಪ್ರತಿಭಟನಾಕಾರರು ಹೇಳಿದರು.
ಸಾನ್ನಿಧ್ಯವನ್ನು ನಾದ ಶಿವಾನಂದ ಶಿವಾಚಾರ್ಯರು ವಹಿಸಿದ್ದರು.
ಪ್ರತಿಭಟನೆಯಲ್ಲಿ ಬಾಳು ಮುಳಜಿ, ಎಸ್.ಟಿ. ಪಾಟೀಲ, ಬಿ.ಡಿ. ಪಾಟೀಲ (ಜೆಡಿಎಸ್ ಮುಖಂಡರು), ಶ್ರೀಶೈಲ ಮದರಿ, ರವಿಕುಮಾರ ಕೆರೂಟಗಿ, ಯಶವಂತ ತೆಲಗ, ಶರಣಗೌಡ ಬಂಡಿ, ಎಂ.ಎಸ್. ಮುಲ್ಲಾ, ಅಜೀಜ್ ದೇಸಾಯಿ, ನನಗೌಡ ಪಾಟೀಲ, ಕಲ್ಯಾಣಿ ಹಿಟ್ನಳ್ಳಿ, ಶಿವಾನಂದ ರಾವೂರ, ಸುರೇಶ ಕುಲಕರ್ಣಿ, ಅಂಬಣ್ಣ ಕವಟಗಿ, ಉಮೇಶ ಬಡಿಗೇರ, ವಿಠ್ಠಲ ಬಿರಾದಾರ, ಪೈಗಂಬರ್ ದೇಸಾಯಿ, ಬಸಣ್ಣ ಸೌವಕರ, ಸಿದ್ದು ತಳವಾರ, ರಫೀಕ್ ವಾಲಿಕಾರ್, ಮಹೇಶ ಹೂಗಾರ, ದುಂಡುಗೌಡ ಬಿರಾದಾರ, ಸಂಗಣ್ಣ ದೇವರಮನಿ, ಪ್ರಶಾಂತ ಲಾಸಂಗಿ, ಬಸು ಖಷ್ಕಿ, ಈಶ್ವರಗೌಡ ಬಗಲಿ, ಮಲ್ಲಪ್ಪ ಮಾಸ್ತಾರ, ಪಾಸೋಡಿ ಸಂಗೋಗಿ, ಸುಭಾಷ ನಾವಿ, ಪ್ರಭುಗೌಡ ಪಾಟೀಲ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಹಾಗೂ ಸುಮಾರು 1,000 ರೈತರು ಪಾಲ್ಗೊಂಡಿದ್ದರು.

