ಬಿ.ಎಲ್.ಡಿ.ಇ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಮೌಲ್ಯಯುತ ಸಂದೇಶ
ಜಮಖಂಡಿ: ಶಿಕ್ಷಕ ಸಮಾಜದ ನಿರ್ಮಾಪಕನಾಗಿದ್ದು, ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ಹಾಗೂ ಜವಾಬ್ದಾರಿಯುತ ವೃತ್ತಿಯಾಗಿದೆ. ಒಬ್ಬ ಶ್ರೇಷ್ಠ ಶಿಕ್ಷಕ ಉತ್ತಮ ಪ್ರಜೆಗಳನ್ನು ರೂಪಿಸುವ ಮೂಲಕ ದೇಶದ ಭವಿಷ್ಯವನ್ನು ರಕ್ಷಿಸುತ್ತಾನೆ. ಶಿಕ್ಷಣವೆಂದರೆ ಕೇವಲ ಪಠ್ಯ ಬೋಧನೆಯಲ್ಲ; ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು, ಶಿಸ್ತು, ಸಂಯಮ ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸುವುದಾಗಿದೆ ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ. ಎನ್.ಬಿ. ನಡುವಿನಮನಿ ಹೇಳಿದರು.
ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ವತಿಯಿಂದ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಎಲ್.ಡಿ.ಇ ಸಂಸ್ಥೆಯ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ. ಬಿ.ಎಂ. ನುಚ್ಚಿ ಮಾತನಾಡಿ, ಬಿ.ಎಡ್ ಶಿಕ್ಷಣವು ಪ್ರಶಿಕ್ಷಣಾರ್ಥಿಗಳಿಗೆ ಶಿಸ್ತು, ಸಂಯಮ, ತಾಳ್ಮೆ ಹಾಗೂ ಸೇವಾ ಮನೋಭಾವವನ್ನು ಕಲಿಸುವ ಮಹತ್ವದ ಹಂತವಾಗಿದೆ. ಶಿಕ್ಷಕನಲ್ಲಿ ತಾಯಿಯಂತಹ ತ್ಯಾಗದ ಗುಣವಿರಬೇಕು. ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯಂತ ಗೌರವಯುತ ಸ್ಥಾನವಿದ್ದು, ಶಿಕ್ಷಕರು ತಮ್ಮ ನಡೆ-ನುಡಿ ಹಾಗೂ ಆದರ್ಶಗಳ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎಸ್. ಕಾಗವಾಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಚಾರ್ಯ ಪ್ರೊ. ಕೆ.ಜೆ. ಜೀರಗಾಳಿ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಪ್ರೊ. ಪ್ರೇಮಾನಂದ ಹಿರೇಮಠ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಮಹಾದೇವ ಗಲಬಿ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ನಿರ್ವಹಿಸಿದರು.
ಪ್ರಶಿಕ್ಷಣಾರ್ಥಿಗಳಾದ ವಿನಯ ಕಟ್ಟಿಮನಿ ಹಾಗೂ ರೋಹಿಣಿ ಔದಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶೃತಿ ಗುಡದಿ ಪ್ರಾರ್ಥಿಸಿದರು. ಸ್ವಾತಿ ಚಿಂಚಕಂಡಿ ಪರಿಚಯಿಸಿದರು. ಶಿವಪ್ರಸಾದ ಹುಣಸಿಕಟ್ಟಿ ಹಾಗೂ ಸ್ಪೂರ್ತಿ ಗದ್ಯಾಳ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಅಥಣಿ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕ ವೃಂದದವರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಸಾಧಕ ವಿದ್ಯಾರ್ಥಿಗಳಿಗೆ ಗೌರವದ ಸನ್ಮಾನ
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಮತ್ತು ವಿಶ್ವವಿದ್ಯಾಲಯ ಮಟ್ಟದ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆ ಹಾಗೂ ಕ್ರೀಡಾ ಕ್ಷೇತ್ರದ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಮೂಲಕ ಇತರ ವಿದ್ಯಾರ್ಥಿಗಳಿಗೂ ಸಾಧನೆಯ ಪ್ರೇರಣೆ ನೀಡಲಾಯಿತು.

