ಹೈದರಾಬಾದ್ನ ಉಸ್ಮಾನಿಯಾ ವಿವಿಯಲ್ಲಿ ವಿಶೇಷ ಉಪನ್ಯಾಸ, ಬಹುಭಾಷಾ ಕವಿಗೋಷ್ಠಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಾಂತಿ, ಸಹನೆ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಹೊಸ ತಲೆಮಾರಿಗೆ ಉತ್ತಮ ಭವಿಷ್ಯದ ಭರವಸೆ ನೀಡುವ ಕವಿತೆಗಳ ಅಗತ್ಯ ಇಂದು ಹೆಚ್ಚಿದೆ ಎಂದು ಕವಿ, ಸಾಹಿತಿ ಡಾ. ಪ್ರಕಾಶ ಖಾಡೆ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಹಾಗೂ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಹೈದರಾಬಾದ್ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆರ್ಟ್ಸ್ ಕಾಲೇಜಿನಲ್ಲಿ ಇತ್ತಿಚಿಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕವಿತೆ ಜನರ ನಡುವೆ ಜೀವಂತವಾಗಿದ್ದು, ಜನಜೀವನದ ಭಾವನೆಗಳಿಗೆ ಅಭಿವ್ಯಕ್ತಿ ನೀಡುತ್ತಿದೆ ಎಂದರು.
ಕನ್ನಡದ ವಚನಕಾರರು ಸಮಾನತೆಯ ಸಂದೇಶ ಸಾರಿದರೆ, ತೆಲುಗು ಕವಿಗಳು ಶ್ರಮಜೀವಿಗಳ ಬದುಕಿಗೆ ಧ್ವನಿಯಾಗಿದ್ದಾರೆ. ದೇಶದ ವಿವಿಧ ಭಾಷೆಗಳ ಕವಿಗಳು ತಮ್ಮ ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯ ಮಾಡಿದ್ದಾರೆ ಎಂದು ಡಾ. ಖಾಡೆ ಬಣ್ಣಿಸಿದರು.
ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಲಿಂಗಪ್ಪ ಗೋನಾಳ ಅವರು ಮಾತನಾಡಿ, ಹೊರನಾಡಿನಲ್ಲಿ ಇಂತಹ ಅರ್ಥಪೂರ್ಣ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಖ್ಯಾತ ಕವಿ ವಾಸುದೇವ ನಾಡಿಗ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ, ಕವಿತೆ ಸಮಾಜವನ್ನು ತಿದ್ದುವ, ಮನುಷ್ಯರನ್ನು ಬೆಸೆಯುವ ಹಾಗೂ ಬದುಕಿನಲ್ಲಿ ಹೊಸ ಆಶಾವಾದ ಮೂಡಿಸುವ ಶಕ್ತಿಯಾಗಿದೆ ಎಂದರು. ಭಾಷೆಗಳು ಬೇರೆ-ಬೇರೆಯಾಗಿದ್ದರೂ ಕಾವ್ಯದ ಮೂಲ ಆಶಯ ಮಾನವೀಯತೆಯನ್ನು ಬೆಸೆಯುವುದೇ ಆಗಿದೆ. ಕವಿತೆ ಜನರ ನಡುವೆ ಇಂದು ಜೀವಂತವಾಗಿದ್ದು, ಜನಜೀವನದ ಭಾವನೆಗಳಿಗೆ ಅಭಿವ್ಯಕ್ತಿ ನೀಡುತ್ತಿದೆ ಎಂದರು.
ಪ್ರೊ. ವಿ.ಬಿ. ತಾರಕೇಶ್ವರ ಅವರು ಜನಪದ ಸಾಹಿತ್ಯ ಕ್ಷೇತ್ರಕ್ಕೆ ಹಲಸಂಗಿ ಗೆಳೆಯರ ಬಳಗ ನೀಡಿದ ಅಪಾರ ಕೊಡುಗೆಯ ಕುರಿತು ಉಪನ್ಯಾಸ ನೀಡಿದರು. ಕಲಬುರಗಿಯ ಡಾ. ಶ್ರೀಶೈಲ ನಾಗರಾಳ ಅವರು ಹಲಸಂಗಿ ಗೆಳೆಯರ ಸಾಹಿತ್ಯಕ ಸಾಧನೆ ಹಾಗೂ ನವೋದಯ ಸಾಹಿತ್ಯ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು.
ಬಹುಭಾಷಾ ಕವಿಗೋಷ್ಠಿ: ಬಳಿಕ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡ, ತೆಲುಗು ಹಾಗೂ ಇಂಗ್ಲಿಷ್ ಭಾಷೆಗಳ ಪ್ರಮುಖ ಕವಿಗಳು ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿದರು.
ಕವಿಗಳಾದ ಸಿದ್ದರಾಮ ಬಿರಾದಾರ, ದೇವು ಮಾಕೊಂಡ, ರಾಚು ಕೊಪ್ಪ, ಸುಮತಿ ನಿರಂಜನ, ಪ್ರಹ್ಲಾದ ಜೋಶಿ, ಧನರಾಜ ಧರ್ಮಪುರ, ಗೋನವಾರ ಕಿಶನ್ ರಾವ್, ಕೊಂಡ ನಾಗೇಶ್ವರರಾವ್, ಬಿ. ಸುಹಾಸಿನಿ, ರಮೇಶ್ ಬಾಬು, ಸೂರ್ಯಪ್ರಕಾಶ, ಸತೀಶ ವಾಲಿ ಹಾಗೂ ವಿಜಯಲಕ್ಷ್ಮಿ ಬಿಸ್ವಾ ಸೇರಿದಂತೆ ಹಲವು ಸಾಹಿತಿಗಳು ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು.
ಸುಹಾಸಿನಿ ಬಿ. ಪ್ರಾರ್ಥಿಸಿ ಸ್ವಾಗತಿಸಿದರು. ಹಲಸಂಗಿ ಗೆಳೆಯರ ಬಳಗ ಪ್ರತಿಷ್ಠಾನದ ಸದಸ್ಯ ಸಂಚಾಲಕರಾದ ಡಾ. ರಮೇಶ ಕತ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಪದಾಧಿಕಾರಿಗಳು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

