ಕೊಲ್ಹಾರದಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು 2026-27 ಕಾರ್ಯಕ್ರಮದ ಅಣಕು ಸಂಸತ್ ಕಲಾಪ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮುಖ್ಯಮಂತ್ರಿ–ವಿರೋಧ ಪಕ್ಷದ ನಾಯಕನ ನಡುವೆ ವಾಕ್ಸಮರ, ಆಡಳಿತ ಪಕ್ಷ–ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ಚರ್ಚೆ, ಪ್ರಶ್ನೋತ್ತರಕ್ಕೆ ಪ್ರತಿಪಕ್ಷದ ತಿರುಗೇಟು… ಕೊನೆಗೆ ಕೆಲ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ! ಇದು ವಿಧಾನಸಭೆಯ ಕಲಾಪವಲ್ಲ. ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಯುವ ಸಂಸತ್ತು 2026-27 ಕಾರ್ಯಕ್ರಮದ ಅಣಕು ಸಂಸತ್ ಕಲಾಪದ ದೃಶ್ಯಗಳು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಹಶೀಲ್ದಾರ್ ಸಂತೋಷ ಮ್ಯಾಗೇರಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನೀಲ ಮದ್ದೀನ ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಸಂಸತ್ತು ವಿದ್ಯಾರ್ಥಿಗಳಿಗೆ ನೈಜ ಸಂಸತ್ತಿನ ಕಾರ್ಯವೈಖರಿಯನ್ನು ಪರಿಚಯಿಸುವುದರ ಜತೆಗೆ ನಾಯಕತ್ವ, ಚರ್ಚಾ ಕೌಶಲ, ಸಂವಿಧಾನಿಕ ಮೌಲ್ಯಗಳು ಹಾಗೂ ಉತ್ತಮ ಆಡಳಿತದ ಅರಿವು ಮೂಡಿಸುತ್ತದೆ ಎಂದರು.
ಸಿ.ಎಚ್. ಗೌಡರ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ದಸ್ತಗೀರ ಕಲಾದಗಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂತೋಷ ಗಣಾಚಾರಿ ಮಾತನಾಡಿದರು. ತಹಶೀಲ್ದಾರ್ ಸಂತೋಷ ಮ್ಯಾಗೇರಿ ಅಧ್ಯಕ್ಷತೆ ವಹಿಸಿದ್ದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ರಾಜಮಾ ನದಾಫ್, ಮುಖ್ಯಾಧಿಕಾರಿ ವೀರೇಶ ಹಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಎಸ್. ಬಾಲಗೊಂಡ, ಉಪತಹಶೀಲ್ದಾರ್ ಎನ್.ಕೆ. ನದಾಫ್, ಶಿಕ್ಷಣ ಸಂಯೋಜಕ ವ್ಹಿ.ಎಚ್. ಪುರೋಹಿತ್, ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಸದಸ್ಯರು, ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾಜ ಕಲ್ಯಾಣ ಅಧಿಕಾರಿ ಮನು ಪತ್ತಾರ ನಿರೂಪಿಸಿದರು. ಎಸ್.ಎನ್. ತಡಲಗಿ ಸ್ವಾಗತಿಸಿದರು.
ಅಣಕು ಕಲಾಪದಲ್ಲಿ ಅಸಲಿ ಉತ್ಸಾಹ
ಕೂಡಗಿಯ ಶ್ರೀ ಸಂಗನಬಸವ ಕಾಲೇಜು ಹಾಗೂ ಕೊಲ್ಹಾರದ ಶ್ರೀ ಸಂಗಮೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರಾಗಿ ಪಾತ್ರ ನಿರ್ವಹಿಸಿದರು. ಸಭಾಪತಿ ಪೀಠ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಸದಸ್ಯರನ್ನೊಳಗೊಂಡಂತೆ ನೈಜ ಸಂಸತ್ತಿನ ಮಾದರಿಯಲ್ಲಿ ಕಲಾಪ ನಡೆಸಲಾಯಿತು.
ಸರ್ಕಾರದ ನೀತಿ, ಆಡಳಿತ ಕ್ರಮಗಳ ಕುರಿತು ಚರ್ಚೆ, ಪ್ರಶ್ನೋತ್ತರ ಹಾಗೂ ಪ್ರತಿಪಕ್ಷದ ಆಕ್ಷೇಪಗಳ ನಡುವೆ ವಿದ್ಯಾರ್ಥಿಗಳು ತಮ್ಮ ವಾದ ಮಂಡಿಸಿದರು. ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕನ ನಡುವಿನ ವಾಕ್ಸಮರ ಗಮನ ಸೆಳೆಯಿತು. ಚರ್ಚೆ ತೀವ್ರಗೊಂಡ ಸಂದರ್ಭದಲ್ಲಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

