ಲಿಂಬೆ, ದಾಳಿಂಬೆ, ದ್ರಾಕ್ಷಿ, ಬಾಳೆ ಬೆಳೆಗಳ ವಾಸ್ತವ ಸ್ಥಿತಿ ಪರಿಶೀಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ತೋಟಗಾರಿಕೆ ಬೆಳೆಗಳ ಮೇಲೆ ಉಂಟಾಗಿರುವ ಪರಿಣಾಮ ಹಾಗೂ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಇಳುವರಿ ನಷ್ಟದ ಕುರಿತು ಸಮಗ್ರ ಅಧ್ಯಯನ ನಡೆಸಲು ತೋಟಗಾರಿಕೆ ವಿಜ್ಞಾನಿಗಳ ನಾಲ್ಕು ವಿಶೇಷ ತಂಡಗಳು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕ್ಷೇತ್ರ ವೀಕ್ಷಣೆ ನಡೆಸಿವೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕರಾದ ಸಿದ್ರಾಮ ಬರಗಿಮಠ ಅವರು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು,ಲಿಂಬೆ, ದಾಳಿಂಬೆ, ದ್ರಾಕ್ಷಿ, ಬಾಳೆ ಸೇರಿದಂತೆ ಬಹುವಾರ್ಷಿಕ ಬೆಳೆಗಳ ವಾಸ್ತವ ಸ್ಥಿತಿ, ನೀರಿನ ಲಭ್ಯತೆ, ಬೆಳೆಗಳ ಆರೋಗ್ಯ ಹಾಗೂ ಪ್ರಸ್ತುತ ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳ ಕುರಿತು ವಿಜ್ಞಾನಿಗಳು ತೋಟಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅ.೫ರಿಂದ ೭ರವರೆಗೆ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಕ್ಷೇತ್ರ ಅಧ್ಯಯನ ಕೈಗೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಒಟ್ಟು ೧,೧೮,೬೩೧ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಈ ಪೈಕಿ ೪೬,೮೦೫ ಹೆಕ್ಟೇರ್ ಪ್ರದೇಶದಲ್ಲಿ ಹಣ್ಣಿನ ಬೆಳೆ ಬೆಳೆಯಲಾಗುತ್ತಿದ್ದು, ೧೧.೮೪ ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ೭೦,೯೧೦ ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆ ಬೆಳೆಯಲಾಗುತ್ತಿದ್ದು, ೧೨.೦೭ ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ಮಳೆ ಕೊರತೆಯ ಹಿನ್ನೆಲೆಯಲ್ಲಿ ಈ ಬೆಳೆಗಳ ಸ್ಥಿತಿಗತಿಯನ್ನು ವೈಜ್ಞಾನಿಕವಾಗಿ ದಾಖಲಿಸಿ, ಮುಂದಿನ ನಿರ್ವಹಣೆಗೆ ಸೂಕ್ತ ಮಾರ್ಗದರ್ಶನ ರೂಪಿಸುವುದು ಅಧ್ಯಯನದ ಪ್ರಮುಖ ಉದ್ದೇಶವಾಗಿದೆ ಎಂದವರು ತಿಳಿಸಿದ್ದಾರೆ.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ವಿಸ್ತರಣಾ ನಿರ್ದೇಶಕರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳನ್ನು ಒಳಗೊಂಡ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಡಾ. ಸಂಗನಬಸವ ಗೊಳ್ಳಗಿ, ಡಾ. ಸತೀಶ ಪತ್ತೇಪುರ ಹಾಗೂ ಎಂ.ಎ. ವಾಸೀಮ್ ಅವರ ತಂಡವು ಬಸವನ ಬಾಗೇವಾಡಿ, ಕೋಲ್ಹಾರ, ನಿಡಗುಂದಿ, ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕುಗಳಲ್ಲಿ ಅಧ್ಯಯನ ನಡೆಸಿದರೆ, ಡಾ. ಸಿದ್ದಣ್ಣ ಟೋಕೆ, ಡಾ. ಸಯೀದ್ ವಾಜಿದ್ ಮುಲ್ಲಾ ಹಾಗೂ ಡಾ. ಜಿ.ಎಸ್. ಚಂದ್ರಶೇಖರ ಅವರ ತಂಡವು ಇಂಡಿ ಮತ್ತು ಚಡಚಣ ತಾಲೂಕುಗಳಲ್ಲಿ ವೀಕ್ಷಣೆ ಕೈಗೊಂಡಿತು.
ಡಾ. ದಾದಾಪೀರ ಪೀರಜಾದೆ, ಡಾ. ಬಸವರಾಜ ಪಡಶೆಟ್ಟಿ ಹಾಗೂ ಡಾ. ರಮೇಶ ಅವರ ತಂಡವು ವಿಜಯಪುರ, ತಿಕೋಟಾ ಮತ್ತು ಬಬಲೇಶ್ವರ ತಾಲೂಕುಗಳಲ್ಲಿ, ಡಾ. ಆನಂದ ನಂಜಪ್ಪನವರ, ಡಾ. ರುದ್ರೇಶ ಡಿ.ಎಲ್. ಹಾಗೂ ಡಾ. ಸಯೀದ್ ಅಲ್ಮಾಸ್ ಮುಲ್ಲಾ ಅವರ ತಂಡವು ಸಿಂದಗಿ, ದೇವರಹಿಪ್ಪರಗಿ ಮತ್ತು ಆಲಮೇಲ ತಾಲೂಕುಗಳಲ್ಲಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಿತು.
ತೋಟಗಾರಿಕೆ ಜಂಟಿ ನಿರ್ದೇಶಕರಾದ ಸಿದ್ರಾಮ ಬರಗಿಮಠ ಅವರು ವಿಜ್ಞಾನಿಗಳೊಂದಿಗೆ ಇಂಡಿ ತಾಲೂಕಿನ ತಡವಲಗಾ, ಅಥರ್ಗಾ, ವಿಜಯಪುರ ತಾಲೂಕಿನ ನಾಗಠಾಣ ಹಾಗೂ ಅಲಿಯಾಬಾದ್ ಗ್ರಾಮಗಳ ತೋಟಗಳಿಗೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು. ಸಿಂದಗಿ ತಾಲೂಕಿನ ಕಡ್ಲೇವಾಡ ಪಿಸಿ, ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಹಾಗೂ ಮುದ್ದೇಬಿಹಾಳ ತಾಲೂಕಿನ ಹಳ್ಳೂರ ಗ್ರಾಮಗಳಲ್ಲಿಯೂ ತಂಡಗಳು ಕ್ಷೇತ್ರ ವೀಕ್ಷಣೆ ನಡೆಸಿದವು.
ವಿಜ್ಞಾನಿಗಳ ಅಧ್ಯಯನದ ಆಧಾರದ ಮೇಲೆ ನೀರಿನ ಸದ್ಬಳಕೆ, ಬೆಳೆ ಸಂರಕ್ಷಣೆ ಹಾಗೂ ಬಹುವಾರ್ಷಿಕ ಬೆಳೆಗಳ ನಿರ್ವಹಣೆಗೆ ಅಗತ್ಯವಾದ ತಾಂತ್ರಿಕ ಶಿಫಾರಸುಗಳನ್ನು ಒಳಗೊಂಡ ವರದಿ ಸಿದ್ಧಪಡಿಸಲಾಗುವುದು. ತಜ್ಞರ ವರದಿ ಆಧರಿಸಿ ಜಿಲ್ಲೆಯ ತೋಟಗಾರಿಕೆ ರೈತರಿಗೆ ಸೂಕ್ತ ವೈಜ್ಞಾನಿಕ ಮಾರ್ಗದರ್ಶನ ಹಾಗೂ ಬೆಳೆ ನಿರ್ವಹಣಾ ಕ್ರಮಗಳನ್ನು ತಲುಪಿಸಲಾಗುವುದು ಎಂದು ತೋಟಗಾರಿಕಾ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

