ಅ.೧೧ರಂದು ನಡೆಯುವ ಕೆ-ಸೆಟ್ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅ.೧೧ ರಂದು ಜಿಲ್ಲೆಯಲ್ಲಿ ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಕೆ-ಸೆಟ್ ಪರೀಕ್ಷೆಯ ಸಿದ್ಧತೆ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷಾ ಕೇಂದ್ರಗಳ ಭದ್ರತೆ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ೨೪ ಪರೀಕ್ಷಾ ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗೆ ೮,೮೧೭ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಪರೀಕ್ಷೆಗೆ ಸಂಬಂಧಿಸಿದಂತೆ ಗೌಪ್ಯ ಸಾಮಗ್ರಿಗಳನ್ನು ಮಾರ್ಗಾಧಿಕಾರಿಗಳ ತಂಡಕ್ಕೆ ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಖಜಾನೆ ಉಪನಿರ್ದೇಶಕರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನೊಳಗೊಂಡ ಸಮಿತಿ ನೇಮಿಸಲಾಗಿದೆ ಎಂದು ತಿಳಿಸಿದರು.
ಫ್ಲೈಯಿಂಗ್ ಸ್ಕ್ವಾಡ್: ಪ್ರತಿ ೪ ರಿಂದ ೫ ಪರೀಕ್ಷಾ ಕೇಂದ್ರಗಳಿಗೆ ಒಂದರಂತೆ ೫ ಸದಸ್ಯರನ್ನೊಳಗೊಂಡ ಫ್ಲೈಯಿಂಗ್ ಸ್ಕ್ವಾಡ್ ತಂಡವನ್ನು ನಿಯೋಜಿಸಲಾಗಿದೆ ಎಂದ ಅವರು, ಪರೀಕ್ಷೆಯಲ್ಲಿ ಯಾವುದೇ ಲೋಪದೋಷಗಳಿಲ್ಲದೆ ಯಾವುದೇ ಸಮಸ್ಯೆ ಬಾರದಂತೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಪೋಲಿಸ್ ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯಿಂದ ಸಂಪೂರ್ಣ ಫ್ರಿಸ್ಕಿಂಗ್-ತಪಾಸಣೆ ನಡೆಸಿದ ನಂತರವೇ ಪ್ರವೇಶ ಕಲ್ಪಿಸಲಾಗುವುದು ತಿಳಿಸಿದರು.
ಸಿಸಿಟಿವಿ-ಜಾಮರ್ ವ್ಯವಸ್ಥೆ: ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಜಾಮರ್‌ಗಳನ್ನು ಸಹ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಅಭ್ಯರ್ಥಿಗಳು ಪರೀಕ್ಷಾ ದಿನದಂದು ತಮ್ಮ ಪ್ರವೇಶ ಪತ್ರವನ್ನು (ಅಡ್ಮಿಟ್ ಕಾರ್ಡ್) ಕಡ್ಡಾಯವಾಗಿ ತರತಕ್ಕದ್ದು. ಪರೀಕ್ಷಾ ಕಾರ್ಯದಲ್ಲಿ ಲೋಪದೋಷಗಳಾಗದಂತೆ ಸಾರಿಗೆ ಸಂಸ್ಥೆ,ಹೆಸ್ಕಾಂ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸೂಕ್ತ ಸಮನ್ವಯ ಸಾಧಿಸಲಾಗಿದ್ದು, ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಖಜಾನೆ ಇಲಾಖೆಯ ಉಪ ನಿರ್ದೇಶಕ ಆನಂದ ಮುಚ್ಚಂಡಿ, ಹೆಸ್ಕಾಂನ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಕೆಕೆಆರ್‌ಟಿಸಿಯ ವಿಭಾಗೀಯ ನಿಯತ್ರಣಾಧಿಕಾರಿ ಡಿ.ಎ. ಬಿರಾದಾರ, ಪಿಎಸ್‌ಐ ಆರೀಫ್, ತರಬೇತಿದಾರರಾದ ಎಲ್. ಜಿ. ಕುಂಬಾರ ಮತ್ತು ಜಗದೀಶ ಗುಲಗಂಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಅಧೀಕ್ಷಕರು ಉಪ ಅಧೀಕ್ಷಕರು ಹಾಗೂ ಪರೀಕ್ಷೆಗಳಿಗೆ ನಿಯೋಜನೆಗೊಂಡ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

