ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯ ಜಿಲ್ಲೆಯ ೭ ಶಿಶು ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಒಟ್ಟು ೬೮ ಅಂಗನವಾಡಿ-ಕಂ-ಕ್ರಷ್ ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಕೇಂದ್ರಗಳಲ್ಲಿ ಖಾಲಿ ಇರುವ ೬೮ ಕಾರ್ಯಕರ್ತೆಯರು ಹಾಗೂ ೬೮ ಸಹಾಯಕಿಯರ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇಂಡಿ ತಾಲೂಕಿನಲ್ಲಿ ೮ ಕಾರ್ಯಕರ್ತೆಯರು ಹಾಗೂ ೮ ಸಹಾಯಕಿಯರು, ಚಡಚಣದಲ್ಲಿ ೪ ಕಾರ್ಯಕರ್ತೆಯರು ಹಾಗೂ ೪ ಸಹಾಯಕಿಯರು, ಸಿಂದಗಿಯಲ್ಲಿ ೮ ಕಾರ್ಯಕರ್ತೆಯರು ಹಾಗೂ ೮ ಸಹಾಯಕಿಯರು, ವಿಜಯಪುರ ಗ್ರಾಮೀಣ ವ್ಯಾಪ್ತಿಯಲ್ಲಿ ೧೦ ಕಾರ್ಯಕರ್ತೆಯರು ಹಾಗೂ ೧೦ ಸಹಾಯಕಿಯರು, ವಿಜಯಪುರ ನಗರದಲ್ಲಿ ೨೪ ಕಾರ್ಯಕರ್ತೆಯರು ಹಾಗೂ ೨೪ ಸಹಾಯಕಿಯರು, ಬಸವನ ಬಾಗೇವಾಡಿಯಲ್ಲಿ ೮ ಕಾರ್ಯಕರ್ತೆಯರು ಹಾಗೂ ೮ ಸಹಾಯಕಿಯರು ಮತ್ತು ಮುದ್ದೇಬಿಹಾಳ ತಾಲೂಕಿನಲ್ಲಿ ೬ ಕಾರ್ಯಕರ್ತೆಯರು ಹಾಗೂ ೬ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಆಯ್ಕೆಯಾಗುವ ಅಂಗನವಾಡಿ-ಕಂ-ಕ್ರಷ್ ಕಾರ್ಯಕರ್ತೆಯರಿಗೆ ಮಾಸಿಕ ₹೫,೫೦೦ ಹಾಗೂ ಸಹಾಯಕಿಯರಿಗೆ ಮಾಸಿಕ ₹೩,೦೦೦ ಗೌರವಧನ ನೀಡಲಾಗುತ್ತದೆ. ಆಸಕ್ತ ಹಾಗೂ ಅರ್ಹ ಮಹಿಳಾ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ಮೂಲ ದಾಖಲೆಗಳೊಂದಿಗೆ ಸಂಬAಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಅಕ್ಟೋಬರ್ ೨೩ರೊಳಗಾಗಿ ಸಲ್ಲಿಸಬೇಕು. ನಿಗದಿತ ಅವಧಿಯ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ನೇಮಕಾತಿಗೆ ಸಂಬಂಧಿಸಿದ ಮಾರ್ಗಸೂಚಿಗಳು, ಅರ್ಹತಾ ಷರತ್ತುಗಳು ಹಾಗೂ ನಿಗದಿತ ಅರ್ಜಿ ನಮೂನೆ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ. ಸಂತೋಷಕುಮಾರ ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
