ವಾರಬಂದಿ ಪದ್ಧತಿ ರದ್ದುಪಡಿಸಿ ನಿರಂತರ ನೀರು ಕೊಡದಿದ್ದರೆ ರೈತ ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಬರಗಾಲದ ನಡುವೆ ಬಿತ್ತನೆ ಮಾಡಿದ ಬೆಳೆ ಉಳಿಸಲು ಮುಳವಾಡ ಮತ್ತು ಚಿಮ್ಮಲಗಿ ಏತ ನೀರಾವರಿಯ ಎಲ್ಲ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕು. ವಾರಬಂದಿ ಪದ್ಧತಿ ರದ್ದುಪಡಿಸಿ ನಿರಂತರ ನೀರು ಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಸೋಮವಾರ ಆಲಮಟ್ಟಿಯಲ್ಲಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಂಟಿಯಾಗಿ ಪ್ರತಿಭಟನೆ ನಡೆಸಿದವು. ರಾಮಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟ ರೈತರು ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಲಕರ್ಣಿ ಹಾಗೂ ಜಿಲ್ಲಾಧ್ಯಕ್ಷ ನಿಂಗರಾಜ್ ಆಲೂರ, “ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ತೊಗರಿ, ಶೇಂಗಾ, ಮೆಕ್ಕೆಜೋಳ, ಹತ್ತಿ ಬೆಳೆಗಳು ನೀರಿಲ್ಲದೆ ಕಮರಿ ಹೋಗುತ್ತಿವೆ. ಜಲಾಶಯದಲ್ಲಿ ೧೦೩.೩೧೫ ಟಿಎಂಸಿ ನೀರಿದ್ದು, ಬಳಕೆಗೆ ೮೫.೬೯೫ ಟಿಎಂಸಿ ಲಭ್ಯವಿದೆ. ಆದ್ದರಿಂದ ಮಂಗಳವಾರದಿAದಲೇ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು. ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ನೀರು ಹರಿಸಬಾರದು” ಎಂದು ಆಗ್ರಹಿಸಿದರು.
ಉಪ ಮುಖ್ಯ ಅಭಿಯಂತರ ಐ.ಎಲ್. ಕಳಸ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ ಬಿರಾದಾರ್, ತಾಲೂಕು ಅಧ್ಯಕ್ಷರಾದ ನಿಂಗರಾಜ್ ನಿಡಗುಂದಿ, ಸೀತಪ್ಪ ಗಣಿ, ಬಸವರಾಜ್ ಬಾಗೇವಾಡಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಅಧಿಕಾರಿಗಳ ಭರವಸೆ
ಪ್ರತಿಭಟನೆ ಬಳಿಕ ಮಾತನಾಡಿದ ಅಧೀಕ್ಷಕ ಅಭಿಯಂತರ ಬಿ.ಎಸ್. ಪಾಟೀಲ್, ಸೋಮವಾರವೇ ಅಧಿಕಾರಿಗಳ ಸಭೆ ನಡೆಸಿ ಮಂಗಳವಾರ ಸಂಜೆಯಿಂದ ಎಲ್ಲ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

