ಕಲಾವಿದರಿಗೆ ಪ್ರೋತ್ಸಾಹ, ತರಬೇತಿ ಕೇಂದ್ರ ಹಾಗೂ ರಂಗಾಯಣ ನಿರ್ಮಾಣಕ್ಕೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಚಡಚಣ: ನಾಡಿನ ಸಂಪ್ರದಾಯ, ಸಂಸ್ಕೃತಿ ಮತ್ತು ಸೌಹಾರ್ದತೆಯನ್ನು ಪಸರಿಸುತ್ತ ಬಂದಿರುವ ಬಯಲಾಟ ಕಲೆಯನ್ನು ಸರ್ಕಾರ ರಾಜ್ಯದ ನಾಡಕಲೆಯಾಗಿ ಘೋಷಿಸಿ, ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಹಾಗೂ ಮೂಲಸೌಕರ್ಯ ಒದಗಿಸಬೇಕು ಎಂದು ಬಯಲಾಟ ಕಲಾವಿದರ ವಿಜಯಪುರ ಜಿಲ್ಲಾ ಅಧ್ಯಕ್ಷ ಎಸ್.ಎಲ್. ಮೇತ್ರಿ ಆಗ್ರಹಿಸಿದರು.
ಝಳಕಿ ಗ್ರಾಮದ ಪ್ರವಾಸಿ ಮಂದಿರದಲ್ಲಿ ಇಂಡಿ ಮತ್ತು ಚಡಚಣ ತಾಲೂಕುಗಳ ಬಯಲಾಟ ಕಲಾವಿದರ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಯಲಾಟ ಕಲಾವಿದರ ಬದುಕು ಇಂದು ಅಂಚಿನ ಸ್ಥಿತಿಯಲ್ಲಿದೆ. ಹಲವು ತಲೆಮಾರುಗಳಿಂದ ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಕಲಾವಿದರಿಗೆ ಸರ್ಕಾರದಿಂದ ನಿರೀಕ್ಷಿತ ಮಟ್ಟದ ಪ್ರೋತ್ಸಾಹ ದೊರೆಯುತ್ತಿಲ್ಲ. ಹೀಗಾಗಿ ಬಯಲಾಟ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
೨೦೧೭ರಲ್ಲಿ ಬಾಗಲಕೋಟೆಯಲ್ಲಿ ಬಯಲಾಟ ಅಕಾಡೆಮಿ ಸ್ಥಾಪನೆಯಾಗಿದ್ದು, ಅಕಾಡೆಮಿಗೆ ಸೂಕ್ತ ಅಧಿಕಾರಿಗಳನ್ನು ನೇಮಿಸಿ, ಅದರ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಬೇಕು. ಬಯಲಾಟ ಕಲಾವಿದರಿಗೆ ತರಬೇತಿ, ಪ್ರದರ್ಶನ ಹಾಗೂ ಕಲಾ ಚಟುವಟಿಕೆಗಳಿಗೆ ಅಗತ್ಯ ವೇದಿಕೆ ಕಲ್ಪಿಸಬೇಕು. ಈ ಕುರಿತು ಜಿಲ್ಲಾ ಸಚಿವ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ ಹಾಗೂ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸರ್ಕಾರದ ಗಮನ ಸೆಳೆದು ಕ್ರಮ ಕೈಗೊಳ್ಳಬೇಕು ಎಂದು ಮೇತ್ರಿ ಮನವಿ ಮಾಡಿದರು.
“ರಾಜ್ಯ ಕಲೆಯಾಗಿ ಘೋಷಿಸಲು ಆಗ್ರಹ”
ರಾಜ್ಯ ಬಯಲಾಟ ಗೌರವ ಅಧ್ಯಕ್ಷ ಶಿವಣ್ಣ ಬಿರಾದಾರ ಮಾತನಾಡಿ, ಬಯಲಾಟ ಕಲಾವಿದರನ್ನು ಕಡೆಗಣಿಸದೆ, ನಾಡಿನ ಸಂಸ್ಕೃತಿಯನ್ನು ಜೀವಂತವಾಗಿರಿಸಿರುವ ಕಲಾವಿದರಿಗೆ ಸರ್ಕಾರ ಮಾನ್ಯತೆ ನೀಡಬೇಕು. ಬಯಲಾಟವನ್ನು ರಾಜ್ಯದ ನಾಡಕಲೆಯಾಗಿ ಘೋಷಿಸಿ, ಕಲೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಬಯಲಾಟ ಕಲೆ ಕೇವಲ ಒಂದು ಜಿಲ್ಲೆಯ ಅಥವಾ ಒಂದು ಪ್ರದೇಶದ ಕಲೆಯಲ್ಲ. ನಾಡಿನ ವಿವಿಧ ಭಾಗಗಳಲ್ಲಿ ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ ಬೆಳೆದುಬಂದಿರುವ ಈ ಕಲೆಯನ್ನು ದೇಶದಾದ್ಯಂತ ಪರಿಚಯಿಸುವ ಪ್ರಯತ್ನವಾಗಬೇಕು. ಸರ್ಕಾರದ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಬಯಲಾಟ ಕಲೆಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಕಾಸುಗೌಡ ಪಾಟೀಲ ಮಾತನಾಡಿ, ಬಯಲಾಟವು ನಮ್ಮ ಸಾಂಪ್ರದಾಯಿಕ ಕಲೆಯಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ. ಆಧುನಿಕ ಮನರಂಜನಾ ಮಾಧ್ಯಮಗಳ ನಡುವೆ ಸಾಂಪ್ರದಾಯಿಕ ಕಲೆಗಳು ಹಿನ್ನಡೆ ಅನುಭವಿಸುತ್ತಿವೆ. ಯುವಜನತೆ ನಮ್ಮ ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳಿಂದ ದೂರವಾಗುತ್ತಿರುವ ಪರಿಸ್ಥಿತಿಯಲ್ಲಿ ಸರ್ಕಾರ ಬಯಲಾಟಕ್ಕೆ ವಿಶೇಷ ಆದ್ಯತೆ ನೀಡಬೇಕು ಎಂದು ಹೇಳಿದರು.
ಬಯಲಾಟವನ್ನು ನಾಡಕಲೆಯಾಗಿ ಘೋಷಿಸಿ, ಕಲಾವಿದರ ಬದುಕಿಗೆ ಭದ್ರತೆ ಒದಗಿಸುವ ಜತೆಗೆ ಕಲೆಯ ಮುಂದಿನ ಪೀಳಿಗೆಗೆ ತರಬೇತಿ ನೀಡಲು ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಮ್ಮರಾಯ ವಾಲಿಕಾರ, ದ್ಯಾಮಗೊಂಡ ಗೌಡನೂರ, ಸಂಗಪ್ಪ ಬಿರಾದಾರ, ಗಂಗಾಧರ ಮಡಿವಾಳ, ಸುರೇಶ ದೋತ್ರೆ, ಗುರುಬಾಳ ಭಾವಿಕಟ್ಟಿ, ಭೀರಣ್ಣ ಕಾಗರ, ಕವಿತಾ ಅಳ್ಳೊಳ್ಳಿ, ಜಯಶ್ರೀ ಬಡಿಗೇರ, ಭಾರತಿ ಚೌಧರಿ, ಗಜರಾಬಾಯಿ ಕಟ್ಟಿಮನಿ, ಶಿವಣ್ಣ ಬಿರಾದಾರ ಸೇರಿದಂತೆ ಚಡಚಣ ಹಾಗೂ ಇಂಡಿ ತಾಲೂಕುಗಳ ಬಯಲಾಟ ಕಲಾವಿದರು ಉಪಸ್ಥಿತರಿದ್ದರು.

