ಉದಯರಶ್ಮಿ ದಿನಪತ್ರಿಕೆ
ಚಡಚಣ: ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪಗಳ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ವತಿಯಿಂದ ಮಂಗಳವಾರ ಚಡಚಣ ಪಟ್ಟಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಪಟ್ಟಣದ ಬಸ್ ನಿಲ್ದಾಣದ ಎದುರುಗಡೆಯ ಶಂಕರನಾಗ್ ರಿಕ್ಷಾ ನಿಲ್ದಾಣದ ಸರ್ಕಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ, ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಆರೋಪಗಳ ಸಂಪೂರ್ಣ ಸತ್ಯ ಹೊರಬರಬೇಕು ಎಂದು ಒತ್ತಾಯಿಸಿದರು.
ಕೆಪಿಎಸ್ಸಿ ಪ್ರಕರಣವನ್ನು ಸಿಬಿಆಯ್ ತನಿಖೆಗೆ ವಹಿಸಬೇಕು, ನೇಮಕಾತಿ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಾಗಿದ್ದವು.
ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದರೆ ಅದರ ಹಿಂದೆ ಇರುವ ಪ್ರತಿಯೊಬ್ಬರ ಪಾತ್ರವನ್ನು ತನಿಖೆಗೊಳಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯ ಹಾಗೂ ಸರ್ಕಾರಿ ನೇಮಕಾತಿಗಳ ಮೇಲಿನ ಸಾರ್ವಜನಿಕರ ವಿಶ್ವಾಸದ ದೃಷ್ಟಿಯಿಂದ ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗಣಪತಿ ರಾಠೋಡ್, ದೀಪಾ ಮಣೂರ, ದ್ಯಾಮಣ್ಣ ನಾಯಕ, ಅಶೋಕ್ ಜಾಧವ, ಚಂದ್ರಕಾಂತ ನಗರೆ, ನಾಭಿರಸೂಲ್ ಜಮಾದಾರ, ನಾಗೇಶ ಸರಸಂಬಿ, ಅಮಸಿದ್ದ ತೊಳೆ, ರಮಜಾನ್ ಕೊಂಕಣಿ, ಸುನಿಲ್ ತೊಳೆ, ಮಲ್ಲಿಕಾರ್ಜುನ ಕಾಂಬಳೆ, ಮುತ್ತುರಾಜ್ ಹೊನಗೊಂಡ, ಸಂಗಣ್ಣ ಬ್ಯಾಕೋಡ, ರೇವಣಸಿದ್ಧ ಮುತ್ಯಾ, ಮಲ್ಲನಗೌಡ ಬಿರಾದಾರ, ಸುನಿಲ್ ರಾಠೋಡ್, ಭಗತ್ ತಳವಾರ, ಅಲ್ಲಾಭಕ್ಷ ಸಯ್ಯದ್, ಮಲ್ಲಿಕಾರ್ಜುನ ಬಿರಾದಾರ, ನಿಂಗಪ್ಪ ಶಿವಶರಣ, ಉಮೇಶ ಖಡ್ಡೆ, ಕಂಟೆಪ್ಪ ಹ್ಯಾಗಾರ, ಅಕ್ಬರ್ ನದಾಫ ಸೇರಿದಂತೆ ಪಕ್ಷದ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ಥಳಿಯ ಪೋಲಿಸರು ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು.

