ಉದಯರಶ್ಮಿ ದಿನಪತ್ರಿಕೆ
ಚಡಚಣ: ಉತ್ತಮ ಸಾರ್ವಜನಿಕ ಸೇವೆ ಸಲ್ಲಿಸಿದ ಸರಕಾರಿ ನೌಕರರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ರಾಜ್ಯ ಸರಕಾರಿ ನೌಕರರ ಸಂಘವು ‘ಸರಕಾರಿ ನೌಕರರ ಸೇವಾ ಪ್ರಶಸ್ತಿ’ಗೆ ಅರ್ಜಿಗಳನ್ನು ಆಹ್ವಾನಿಸಿದೆ.
ದಕ್ಷತೆ, ಪ್ರಾಮಾಣಿಕತೆ ಹಾಗೂ ಕ್ರಿಯಾಶೀಲತೆಯಿಂದ ಸೇವೆ ಸಲ್ಲಿಸುತ್ತಿರುವ ಸರಕಾರಿ ನೌಕರರನ್ನು ಗುರುತಿಸಿ, ಅವರ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ನವೆಂಬರ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವುದು. ಅರ್ಹ ಸರಕಾರಿ ನೌಕರರ ನಾಮನಿರ್ದೇಶನಗಳನ್ನು ಆನ್ಲೈನ್ ಮೂಲಕ ಆಹ್ವಾನಿಸಲಾಗಿದ್ದು, ನಿಗದಿತ ಮಾನದಂಡಗಳ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ಪ್ರಶಸ್ತಿಗೆ ಆಯ್ಕೆಯಾಗುವ ನೌಕರರಿಗೆ ತಲಾ ₹20 ಸಾವಿರ ನಗದು ಬಹುಮಾನ ಹಾಗೂ ಗೌರವ ನೀಡಲಾಗುವುದು ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಡಚಣ ತಾಲೂಕಿನ ಅರ್ಹ ಸರಕಾರಿ ನೌಕರರು ಆನ್ಲೈನ್ ಮೂಲಕ ನಾಮನಿರ್ದೇಶನ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಚಡಚಣ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜಗಿ ತಿಳಿಸಿದ್ದಾರೆ.

