ಚುನಾವಣಾ ಆಯೇಗದ ಆಯುಕ್ತ ಜ್ಞಾನೇಶ್ ಕುಮಾರ್ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಿಭಟನೆ | ಸಚಿವ ಎಂ.ಬಿ.ಪಾಟೀಲ ಆರೋಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಅಂಬೇಡ್ಕರ್ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆದ ಪ್ರತಿಭಟನಾ ಜಾಥಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರೊಂದಿಗೆ ಅನೇಕ ಮುಖಂಡರು, ಮಹಾನಗರ ಪಾಲಿಕೆ ಸದಸ್ಯರು ಹೆಜ್ಜೆಹಾಕಿದರು.
ಈ ವೇಳೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ ಅವರು, ಕೇಂದ್ರ ಚುನಾವಣಾ ಆಯೋಗವು ಮೋದಿ ಮತ್ತು ಅಮಿತ್ ಶಾ ಅವರ ಕೈಗೊಂಬೆಯಾಗಿದೆ. ಕೂಡಲೇ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ, ಬಂಧಿಸಬೇಕು ಮತ್ತು ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನಮ್ಮ ನಾಯಕ ರಾಹುಲ್ ಗಾಂಧಿಯವರು ‘ವೋಟ್ ಚೋರಿ’ ಕುರಿತು ಹಲವು ಸಂದರ್ಭಗಳಲ್ಲಿ ಪ್ರಶ್ನೆಗಳನ್ನು ಎತ್ತಿ ಹೋರಾಟ ನಡೆಸಿದ್ದಾರೆ. ದೇಶಾದ್ಯಂತ ಕಾಂಗ್ರೆಸ್ ಈ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳನ್ನು ನಡೆಸುತ್ತಿದೆ ಎಂದರು.
ವಿಜಯಪುರ ಜಿಲ್ಲೆಯಲ್ಲೂ ಮತ ಕಳವಿಗೆ ನಡೆದ ಪ್ರಯತ್ನವನ್ನು ಇಲ್ಲಿನ ಆಡಳಿತವು ತಡೆದು ಉತ್ತಮ ಕೆಲಸ ಮಾಡಿದೆ. ಅರ್ಜಿ ನೀಡಿದವರು ಈಗ ಹಿಂದೆ ಸರಿದಿದ್ದರೂ, ಇದೊಂದು ಗಂಭೀರ ಕೃತ್ಯವಾಗಿದೆ. ಈ ಕುರಿತು ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಸಚಿವರು ನುಡಿದರು.
ಪ್ರತಿಭಟನೆಯಲ್ಲಿ ಡಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮಾಜಿ ಶಾಸಕ ರಾಜು ಆಲಗೂರ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು.

