ಡೋಣೂರ ಗ್ರಾಮದ ಅಮೋಘಸಿದ್ದೇಶ್ವರನ ಮಳೆ ಹೇಳಿಕೆಯ ಭವಿಷ್ಯವಾಣಿ ಈ ಬಾರಿಯೂ ಸತ್ಯವಾಯಿತು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: “ಮೀರಗಾ ಮಿಂಚು ಮಳೆಗೆ ಮಂಡಿ,(ಬಿತ್ತುವ ಕೂರಿಗೆ) ನಡುವೆ ಟೊಳ್ಳು ಉಳಿತಲೇ…ಉತ್ತರಿ-ಹಸ್ತ ಆಯಿತು, ಹೋಯ್ತು…ಸ್ವಾತಿ ದೇಶಕ್ಕೆ ಸಂಪೂರ್ಣ” ಹಿಡಿ ಭಂಡಾರ ಎಂದು ಯುಗಾದಿ ಹಬ್ಬದ ದಿನವೇ ಡೋಣೂರ ಗ್ರಾಮದ ಆರಾಧ್ಯ ದೈವ ಶ್ರೀ ಅಮೋಘಸಿದ್ದೇಶ್ವರ ಭವಿಷ್ಯವಾಣಿ ಹೊರ ಬಂದಿತ್ತು. ಆಗಲೇ ಗ್ರಾಮಸ್ಥರು ಗಲಿಬಿಲಿಗೊಂಡು ಮುತ್ಯಾ ಹೇಳಿದರೆ ಮುಗಿತು ಮುಂಗಾರು ಮಳೆ ಆಗೋಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಯಾಕೆಂದರೆ ಈ ಹಿಂದೆ ಡೋಣೂರ ಅಮೋಘಸಿದ್ದೇಶ್ವರನ ಮಳೆ ಹೇಳಿಕೆ ಸುಳ್ಳಾಗಿಲ್ಲ ಈ ಬಾರಿಯೂ ಸತ್ಯವಾಯಿತು.
ನಾಡಿನಲ್ಲಿ ಮುಂಗಾರು, ಹಿಂಗಾರಿನ ಎಲ್ಲ ಮಳೆಗಳು ಕೈ ಕೊಟ್ಟವು. ಭೀಕರ ಬರಗಾಲದ ಛಾಯೆ, ಜನ ಜಾನುವಾರಗಳಿಗೆ ಮೇವಿನ ಕೊರತೆ, ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿ ರೈತರು ಭಯದಲ್ಲಿಯೇ ದಿನ ದೂಡಿದ್ದರು.
ಆದರೆ ಶ್ರೀ ಅಮೋಘಸಿದ್ದೇಶ್ವರನ ದೈವಿಕ ಶಕ್ತಿ ಗೊತ್ತಿರುವ ಗ್ರಾಮಸ್ಥರು ಗಣೇಶ ಚೌತಿಗೆ ನಡೆಯುವ ಶ್ರೀ ಅಮೋಘಸಿದ್ದೇಶ್ವರನ ಜಾತ್ರೆಯಲ್ಲಿ ಹೊರಡುವ ಪಲ್ಲಕ್ಕಿಯು, ಗ್ರಾಮದ ಅಗಸಿ ಪ್ರವೇಶವಾಗುತ್ತಿದ್ದಂತೆ ರೈತರು ಒಟ್ಟಾಗಿ ಪಲ್ಲಕಿಗೆ ಅಡ್ಡಗಟ್ಟಿ ಮಳೆ ಬೇಕು ಎಂದು ಪಟ್ಟು ಹಿಡಿದಾಗ, ಪೂಜಾರಿ ನಿಂಗಪ್ಪ ಮುತ್ಯಾ ಒಡೆಯರ್ ಮತ್ತೆ ಕಾರ್ಣಿಕ ನೀಡಿದು, ಭಕ್ತಿಯಿಂದ ಸಪ್ತಾಹ ಮಾಡಿ, ಎತ್ತಿನ ಬಂಡಿಯಲ್ಲಿ ಕೃಷ್ಣಾ ಜಲವನ್ನು ತೆಗೆದುಕೊಂಡು ಗ್ರಾಮದ ಎಲ್ಲ ದೇವರುಗಳಿಗೆ ಜಲಾಭೀಷೇಕ ಮಾಡಬೇಕು. ಅಷ್ಟೇ ಅಲ್ಲ ಗ್ರಾಮದಲ್ಲಿರುವ ಎಲ್ಲ ಸಮುದಾಯಗಳ ರುದ್ರಭೂಮಿಗಳಿಗೆ ಡೋಣಿ ನದಿ ನೀರನ್ನು ಸಮರ್ಪಿಸಬೇಕು. ಆಗ ನಿಮಗೆ ಬಂದಿರುವ ಕಷ್ಟ ನಿವಾರಣೆಯಾಗಿ ಮಳೆ ಬೆಳೆ ಕೊಡುತ್ತೇನೆ ಎಂದು ಹೇಳಿದರು.
ತಕ್ಷಣವೇ ಗ್ರಾಮಸ್ಥರೆಲ್ಲರೂ ಜಾತಿ-ಧರ್ಮ ಬೇಧ-ಬಾವ ಇಲ್ಲದೇ ದಿ.23.09.2026 ರ ಬುಧವಾರವೇ ಸಪ್ತಾಹ ಪ್ರಾರಂಭಿಸಿ 5 ದಿನಗಳ ಕಾಲ ಹಗಲು-ರಾತ್ರಿ ನಿರಂತರ ಭಜನೆ ಪ್ರಾರಂಭಿಸಿದರು. ಭಜನೆ ಪ್ರಾರಂಭವಾದ ಮೂರೇ ದಿನಗಳಲ್ಲಿ ಗ್ರಾಮದಲ್ಲಿ ಮಳೆ ಆರ್ಭಟಿಸಿ ಹೊಲದಲ್ಲಿನ ಬದುಗಳು ತುಂಬಿ ಒಣಗಿ ಹೋಗುತ್ತಿದ್ದ ಬೆಳೆಗಳು ಒಂದೇ ದಿನದಲ್ಲಿ ಹಚ್ಚ ಹಸಿರಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿತು.
ದಿ.27 ರಂದು ರವಿವಾರ ಸಂಜೆ ಡೋಣೂರ ಗ್ರಾಮದ ಹೊರ ಭಾಗದಲ್ಲಿರುವ ಪ್ರೌಢಶಾಲಾ ಆವರಣದಲ್ಲಿ ಕೃಷ್ಣಾ ಜಲ ತುಂಬಿಕೊಂಡು ಬಂದು ನಿಂತಿದ್ದ 25 ಎತ್ತಿನ ಬಂಡಿಗಳನ್ನು ಹಾಗೂ 50 ಕ್ಕೂ ಹೆಚ್ಚಿನ ಸಂಖ್ಯೆಯ ಸುಮಂಗಲೇಯರು. ಆಲಮಟ್ಟಿಯ ಚಂದ್ರಗಿರಿಯಿಂದ ಪಾದಯಾತ್ರೆಯಲ್ಲಿಯೇ ತುಂಬಿದ ಕೊಡಗಳನ್ನು ಹೊತ್ತು ತಂದಿದ್ದರು ಅವರನ್ನು ದಿ.28 ಸೋಮವಾರ ದಂದು ಡೊಳ್ಳು, ಹಲಗೆ, ಬಾಜಿ-ಭಜಂತ್ರಿಗಳೊಂದಿಗೆ ಭವ್ಯ ಸ್ವಾಗತ ಮಾಡಿಕೊಂಡು ಗ್ರಾಮದ ಶ್ರೀ ಅಮೋಘಸಿದ್ದೇಶ್ವರನಿಗೆ ಪವಿತ್ರ ಕೃಷ್ಣಾ ಜಲವನ್ನು ಸಮರ್ಪಸಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಗ್ರಾಮದ ಸಮಸ್ತ ದೇವರುಗಳಿಗೆ ಕೃಷ್ಣಾ ಜಲಾಭೀಷೇಕ ನೆರವೇರಿಸಿ ಮಹಾಪೂಜೆ ನೆರವೇರಿಸಿದರು.

ಬಂದಿರುವ ಕಷ್ಟ ಬದಿಗೆ ಸರಿಸುವೆ
“ಸೊಕ್ಕು ಬಂದಾದಲೇ ನಿಮಗ್… ವಾಹನದಲ್ಲಿ ಕೃಷ್ಣಾ ಜಲ ತಂದರೆ, ಕೆಲಸ ಆಗಲ್ಲ… ಬಸವಣ್ಣನ ಸಿಂಗರಿಸಿ ಎತ್ತಿನ ಬಂಡಿಯಲ್ಲಿಯೇ ನೀರು ತರಬೇಕು… ಇಲ್ಲ ಪಾದಯಾತ್ರೆಯಲ್ಲಿಯೇ ನೀರು ತರಬೇಕು. ನಿಮಗೆ ಬಂದಿರುವ ಕಷ್ಟ ಬದಿಗೆ ಸರಿಸುವೆ ಎಂದು ಕೂಗಾಡಿದ ಶ್ರೀ ಅಮೋಘಸಿದ್ದೇಶ್ವರ ಪೂಜಾರಿ ನಿಂಗಣ್ಣ ಮುತ್ಯಾ ಒಡೆಯರ.”
“ನಮ್ಮೂರ ಆರಾಧ್ಯ ದೈವ ಶ್ರೀ ಅಮೋಘಸಿದ್ದೇಶ್ವರ ಕಾರ್ಣಿಕ ನುಡಿಗಳು ಎಂದಿಗೂ ಸುಳ್ಳಾಗುವುದಿಲ್ಲ. ಮಳೆ ಕುರಿತಾಗಿ ಇಲ್ಲಿನ ನಿಂಗಪ್ಪ ಒಡೆಯರ್ ಪೂಜಾರಿಗಳು ಹೇಳಿದ ಕಾರ್ಣಿಕ ನುಡಿಯಂತೆ ನಾವು ಕೃಷ್ಣಾ ನದಿ ಜಲವನ್ನು ತಂದು ಜಲಾಭೀಷೇಕ ಮಾಡಿದ್ದೇವೆ. ನಮ್ಮ ಭಾಗಕ್ಕೆ ಸ್ವಲ್ಪ ಮಳೆಯಾಗಿದೆ.”
– ಜೊತೆಪ್ಪ ಜ್ಯೋತಿ
ಗ್ರಾ.ಪಂ.ಮಾಜಿ ಸದಸ್ಯರು, ಡೋಣೂರ
ಕೋಟ್….
ಮಳೆ ಕುರಿತಾಗಿ ಡೋಣೂರಿನ ಶ್ರೀ ಅಮೋಘಸಿದ್ದೇಶ್ವರನ ಕಾರ್ಣಿಕ ನುಡಿಗಳು ನೂರಕ್ಕೆ ನೂರು ಸತ್ಯವಾಗಿವೆ. ನಾವು ಅವರ ಕಾರ್ಣಿಕ ನುಡಿ ಆಧರಿಸಿಯೇ ಮಳೆ ಪ್ರಮಾಣಕ್ಕೆ ತಕ್ಕಂತೆ ಬೆಳೆ ಬಿತ್ತನೆ ಮಾಡುತ್ತೇವೆ. ನಮ್ಮೂರ ಭಾಗದಲ್ಲಿ ಬೆಳೆಗಳು ಒಣಗಿ ಹೋಗುತ್ತಿದ್ದವು ಆ ಸಂದರ್ಭದಲ್ಲಿ ನಾವು ಚೌತಿ ಕಾರ್ಣಿಕ ನುಡಿ ಕೇಳಿ ಸಪ್ತಾಹ ಹಮ್ಮಿಕೊಂಡಿದ್ದೆವು ಈಗ ಮಳೆಯಾಗಿದ್ದು ನಮಗೆಲ್ಲ ಸಂತೋಷವಾಗಿದೆ.
-ಶಿವಾನಂದ ಮರನೂರ, ಮಾಜಿ ಗ್ರಾ. ಪಂ. ಸದಸ್ಯರು, ಡೋಣೂರ

