ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ.ಆಪರೇಟಿವ್ ಸೊಸೈಟಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ.ಆಪರೇಟಿವ್ ಸೊಸೈಟಿಯು ರಾಜ್ಯದಲ್ಲಿಯೇ ನಂಬರ್ 1 ಸ್ಥಾನದಲ್ಲಿದೆ. ಜನ ನಮ್ಮ ಸಂಸ್ಥೆ ಮೇಲಿಟ್ಟಿರುವ ಅಪಾರ ನಂಬಿಕೆಯಿಂದಲೇ ಇಂದು ಠೇವಣಿ ರೂ.6,140 ಕೋಟಿ ತಲುಪಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಹೇಳಿದರು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ.ಆಪರೇಟಿವ್ ಸೊಸೈಟಿ 20ನೇ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ಧಸಿರಿ ಒಂದು ಕುಟುಂಬವಿದ್ದಂತೆ, ಪ್ರಾಮಾಣಿಕ ಶ್ರಮಿಕರಿಗೆ ಕಾಮಧೇನು ಕಲ್ಪವೃಕ್ಷವಾಗಿದೆ. ಜನಸೇವೆಯೇ ನಮ್ಮ ಮುಖ್ಯ ಉದ್ದೇಶ. ಯಾರ ಕುಟುಂಬಗಳನ್ನು ಮುಗಿಸುವ ಕೆಟ್ಟ ಬುದ್ದಿ ನಮ್ಮಗಳಿಗಿಲ್ಲ. ಅಮಾಯಕರಿಗೆ ಮೋಸ ಮಾಡಿ ಏನು ಮಾಡೋದು? ಎಂದರು.
ನಮ್ಮ ಸಂಸ್ಥೆ ಸಮುದ್ರದಂತೆ ಬೆಳೆದಿದೆ. ಯಾರು ಏನೇ ಮಾಡಿದರೂ ಏನೂ ಮಾಡಲು ಆಗುವುದಿಲ್ಲ. ಅಪಪ್ರಚಾರಕ್ಕೆ ಜನರೇ ಉತ್ತರ ನೀಡುತ್ತಾರೆ. ವಂಚನೆ, ಮೋಸ ಮಾಡಿದವರಿಗೆ ಶಿಕ್ಷೆ ಕೂಡ ನಿಶ್ಚಿತ. 30 ವರ್ಷಗಳಿಂದ ಅಧ್ಯಕ್ಷನಾಗಿರುವ ಸಿದ್ದೇಶ್ವರ ಸಂಸ್ಥೆಯಲ್ಲಿಯೂ ಒಂದೇ ಒಂದು ಹಗರಣ ತೋರಿಸುವ ತಾಕತ್ತು ಯಾರಿಗೂ ಇಲ್ಲ. ಕೇವಲ ರೂ.1 ಕೋಟಿ ಇದ್ದ ಆಸ್ತಿ, ಇಂದು 465 ಕೋಟಿಯಾಗಿದೆ ಎಂದರು.
ಸೊಸೈಟಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ನಿರ್ದೇಶಕರಾದ ಬಸಯ್ಯ ಹಿರೇಮಠ, ಸಂಗನಬಸಪ್ಪ ಸಜ್ಜನ, ಶಿವಾನಂದ ಅಣೆಪ್ಪನವರ, ಸಾಯಿಬಾಬಾ ಸಿಂದಗೇರಿ, ಜಗದೀಶ ಕ್ಷತ್ರಿ, ವಿಜಯಕುಮಾರ್ ಚವ್ಹಾಣ, ಶೈಲಜಾ ಪಾಟೀಲ, ಸೀಮಾ ಕೋರೆ, ಸೋಮಶೇಖರ ಬಂಡಿ, ಬಸನಗೌಡ ಪಾಟೀಲ ನಾಗರಾಳಹುಲಿ, ಗಣಪತಿ ಜಾಧವ, ವೈಭವ ಡಾಂಗೆ, ಆದರ್ಶ ಪಾಟೀಲ, ನಾಗರಾಜ ಮುಳವಾಡ, ಅಬೋಲಿ ಪಾಟೀಲ, ಆಕಾಶ ಗುತ್ತೇದಾರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೊತಿಬಾ ಖಂಡಾಗಳೆ ಸೇರಿದಂತೆ ಮತ್ತಿತರರು ಇದ್ದರು.
ರೂ.36.99 ಕೋಟಿ ನಿವ್ವಳ ಲಾಭ
ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ.ಆಪರೇಟಿವ್ ಸೊಸೈಟಿ ಅಧ್ಯಕ್ಷ ರಾಮನಗೌಡ ಪಾಟೀಲ ಯತ್ನಾಳ ಮಾತನಾಡಿ, ಆಡಳಿತ ಮಂಡಳಿ, ಗ್ರಾಹಕರ ಸಹಕಾರ, ವಿಶ್ವಾಸ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಶ್ರಮದಿಂದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತ 2025-26ನೇ ಸಾಲಿನಲ್ಲಿ ರೂ.36.99 ಕೋಟಿ ನಿವ್ವಳ ಲಾಭ ಗಳಿಸಿದ್ದು, ಈ ವರ್ಷ ಶೇ 15 ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದರು.
ಪ್ರಸ್ತುತ ಸೊಸೈಟಿ ದಾಖಲೆಯ ರೂ. 6140 ಕೋಟಿ ಠೇವಣಿಯಿದ್ದು, 2026 ಮಾರ್ಚ್ ಅಂತ್ಯಕ್ಕೆ 85.37 ಕೋಟಿ ಶೇರು ಬಂಡವಾಳ, 5,638.99 ಕೋಟಿ ದುಡಿಯುವ ಬಂಡವಾಳ, 5,201.92 ಕೋಟಿ ಠೇವಣಿಗಳು, 3905.56 ಕೋಟಿ ಸಾಲ ಮುಂಗಡ, 113.78 ಕೋಟಿ ಕಾಯ್ದಿಟ್ಟ ನಿಧಿ, 59.11 ಕೋಟಿ ನಿಶ್ಚಿತ ಆಸ್ತಿಗಳು, ರೂ.432 ಕೋಟಿ ಹೂಡಿಕೆ ಹೊಂದಿದೆ ಎಂದು ತಿಳಿಸಿದರು.

