ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಭವ ಬಂಧನದಿಂದ ಭಗವಂತನೆಡೆಗೆ ಕೊಂಡೊಯ್ಯುವ ಶಕ್ತಿ ಭಕ್ತಿಗೆ ಇದೆ, ಶಕ್ತಿ ಮತ್ತು ಭಕ್ತಿ ಹೊಂದಿದಾಗ ಮಾತ್ರ ಮುಕ್ತಿ ಹೊಂದಲು ಸಾಧ್ಯ ಎಂದು ರಮೇಶ ಶಾಸ್ತ್ರಿ ಯಾಳಗಿ ಹೇಳಿದರು.
ಪಟ್ಟಣದ ಶ್ರೀಗುರು ಕಾಂತೇಶ್ವರ ಜನಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಹಿರೇಮಠ ಸಂಸ್ಥಾನದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಮತ್ತು ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬದುಕಲಿ ಬರುವ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಲ್ಲಲು, ಸದ್ಗುರುವಿನ ಸನ್ನಿಧಿಯಲ್ಲಿ ಸೇರೋಣ ಎಂದವರು, ನರನನ್ನು ಹರನನ್ನಾಗಿಸುವ ಅದಮ್ಯ ಚೈತನ್ಯ ಸ್ವರೂಪವೇ ಸದ್ಗುರು ಎನ್ನುತ್ತಾ, ಮಣ್ಣಿನ ಕಾಯ ಮಣ್ಣಲ್ಲಿ ಮಣ್ಣಾಗುವ ಮೊದಲು ಮಹಾದೇವನ ನೆನೆಯುವ ಸದುದ್ದೇಶದ ಮಾಸಿಕ ಹುಣ್ಣಿಮೆಯ ಮಹಾನ್ ಕಾರ್ಯಕ್ಕೆ ಸದ್ಭಕ್ತರ ಕೈಜೋಡಿಸಬೇಕು ಎಂದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಷ ಬ್ರ ಶ್ರೀ ಚನ್ನಬಸವ ಶಿವಾಚಾರ್ಯರು ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡು ಪ್ರಪಂಚದ ಜೊತೆ ಜೊತೆಗೆ ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಂಡರೆ ಜೀವನ ಸಾರ್ಥಕ ಎನಿಸುತ್ತದೆ ಎಂದು ಆಶಿಸಿದರು.
ಸೋಮನಾಥ ಯಾಳಗಿ ಹಾಗೂ ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಡಾ ಯಂಕನಗೌಡ ಎಸ್ ಪಾಟೀಲ್ ನಿರೂಪಿಸಿ ವಂದಿಸಿದರು.
ಸಾಹಿತಿ ನಿಂಗನಗೌಡ ದೇಸಾಯಿ, ನಿಜಗುಣಿ ವಿಶ್ವಕರ್ಮ, ಅಭಿಷೇಕ ಪಾಟೀಲ್, ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.

