ರೈತ ಸಂಘದ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ ಅಭಿಮತ
ವಿಜಯಪುರ: ರಾಜ್ಯದಲ್ಲಿ ಬರಪರಿಸ್ಥಿತಿ ತಲೆದೋರಿ ರೈತ ಸಮುದಾಯ ತೀವ್ರ ಸಂಕಷ್ಟಕ್ಖೆ ಸಿಲುಕಿದ್ದು, ರೈತರ ಅನುಕೂಲಕ್ಕಾಗಿ ಏಕೆ ಒಂದು ಗ್ಯಾರಂಟಿ ಯೋಜನೆ ಘೋಷಣೆ ಮಾಡಬಾರದು? ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ನಗರದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಮಂಗಳವಾರ ನಡೆದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ತೊಳಲಾಡುತ್ತಿದ್ದಾರೆ. ರೈತರಿಗಿರುವಷ್ಟು ಸಂಕಷ್ಟ ಬೇರಾರಿಗೂ ಇಲ್ಲ. ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆಯೇನೋ ನಿಜ. ಅದೇ ರೀತಿ ರೈತರಿಗೆ ಅನುಕೂಲವಾಗುವಂತೆ ರೈತರ ಜಮೀನಿಗೆ ನೀರು ಒದಗಿಸುವ, ಪಂಪಶೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವ, ಬೆಳೆದ ಬೆಳೆಗೆ ಸರಿಯಾದ ಬೆಲೆ ಕೊಡಿಸುವ ಗ್ಯಾರಂಟಿ ಯೋಜನೆಯನ್ನು ಘೋಷಿಸಬಹುದಾಗಿತ್ತಲ್ಲ ಎಂದು ಒತ್ತಾಯಿಸಿದರು.
ಚುನಾವಣೆ ಬಂದಾಗ ರೈತರು, ನೀರಾವರಿ ಯೋಜನೆಗಳು ರಾಜಕಾರಣಿಗಳ ನೆನಪಿಗೆ ಬರುತ್ತವೆ. ಚುನಾವಣೆಯಾದ ನಂತರ ಮರೆತುಬಿಡ್ತಾರೆ. ಅದಕ್ಕಾಗಿ ರೈತರು ಜಾಗೃತರಾಗಿ ನಮ್ಮ ಬೇಡಿಕೆಗಳ ಈಡೇರಿಕೆಗೆ ಸರಕಾರದ ಗಮನ ಸೆಳೆಯಲು ಸಂಘಟಿತವಾದ ಹೋರಾಟ ಮಾಡಬೇಕೆಂದು ಅವರು ಕರೆ ನೀಡಿದರು.
ಕಳೆದ ಎರಡ್ಮೂರು ತಿಂಗಳಿಂದ ಮಳೆಯಿಲ್ಲದೆ, ಬಿತ್ತಿದ ಬೆಳೆಗಳೆಲ್ಲಾ ಒಣಗಿ ಹೋಗಿವೆ. ಕೆರೆಕಟ್ಟೆಗಳು ಬರಿದಾಗಿವೆ. ಅಣೆಕಟ್ಟೆಗಳೂ ಸಂಪೂರ್ಣ ಭರ್ತಿಯಾಗಿಲ್ಲ. ಇಂಥ ಸಂದರ್ಭದಲ್ಲಿ ರೈತರಿಗೆ ಬೆಳೆ ವಿಮೆಯೂ ಸಿಗ್ತಾ ಇಲ್ಲ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಹಿರಿಯ ರೈತ ಹೋರಾಟಗಾರ ಬಿ.ಸಿ.ಪಾಟೀಲ ಮಾತನಾಡಿದರು.
ಮೈಸೂರಿನ ರೈತ ಹೋರಾಟಗಾರ್ತಿ ಶ್ರೀಮತಿ ಉಮಾದೇವಿ ಮಾತನಾಡಿದರು.
ಹಾವೇರಿಯ ನ್ಯಾಯವಾದಿ ಸೋಮಶೇಖರ ಮಾತನಾಡಿ,
ಮಳೆಯಾಗದೇ ರೈತರು ತೀವೃ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಇಂಥ ಸಂದರ್ಭದಲ್ಲಿ ಸರಕಾರ ರೈತರ ನೆರವಿಗೆ ಬರಬೇಕು. ಸರಕಾರ ಕೇವಲ ಬರಗಾಲವೆಂದು ಘೋಷಿಸಿದರೆ ಸಾಲದು. ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ.ಬರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ, ಸಂಘದ ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಮೀನಿನ ದಾರಿಯ ಸಮಸ್ಯೆ ಇತ್ಯರ್ಥಕ್ಕಾಗಿ ನಡೆದ ರೈತ ಸಂಘದ ಹೋರಾಟಕ್ಖೆ ಜಯದೊರೆತ ಹಿನ್ನೆಲೆಯಲ್ಲಿ ಈ ಹೋರಾಟಕ್ಖೆ ಬೆಂಬಲ ನೀಡಿದ ಜಿಲ್ಲಾ ಮಾಧ್ಯಮ ಪ್ರತಿನಿಧಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಅರವಿಂದ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು

