ಸಿಂದಗಿಯಲ್ಲಿ ‘ನಶೆ ಮುಕ್ತ ಭಾರತ ಅಭಿಯಾನ’ದ ಜಾಗೃತಿ ಜಾಥಾಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವ್ಯಸನವು ಮಸಣಕ್ಕೆ ದಾರಿ ತೋರಿಸುತ್ತದೆ. ಇಂದಿನ ಹೊಸ ಪೀಳಿಗೆಯನ್ನು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು” ಎಂದು ಆರ್.ಡಿ. ಪಾಟೀಲ ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ಸಿಂದಗಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಐ.ಬಿ. ಬಿರಾದಾರ ಹೇಳಿದರು.
ಲಯನ್ಸ್ ಕ್ಲಬ್ ಸಿಂದಗಿ, ಸಿ.ಎಂ. ಮನಗೂಳಿ ಪದವಿ ಮಹಾವಿದ್ಯಾಲಯದ ರೆಡ್ ಕ್ರಾಸ್ ಘಟಕ ಹಾಗೂ ಜೆ.ಎಚ್. ಪಟೇಲ್ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ‘ನಶೆ ಮುಕ್ತ ಭಾರತ ಅಭಿಯಾನ’ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಯುವಜನತೆ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದಂತೆ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವ್ಯಸನದಿಂದ ವ್ಯಕ್ತಿಯ ಆರೋಗ್ಯ, ಕುಟುಂಬ ಮತ್ತು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಯುವಜನರಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಅಂಬರೀಶ್ ಬಿರಾದಾರ, ಎಂ.ಜೆ.ಎಫ್. ಲಯನ್ ಕೆ.ಎಚ್. ಸೋಮಪುರ, ಜೆ.ಎಚ್. ಪಟೇಲ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಎಂ. ಹುರುಕಡ್ಲಿ, ಸಿ.ಎಂ. ಮನಗೂಳಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಬಿ.ಡಿ. ಮಾಸ್ತಿ, ಡಾ. ಎಸ್.ಕೆ. ಹೂಗಾರ, ಪ್ರೊ. ಎಂ.ಎಲ್. ಪರಮಾನಂದ, ಗುರುಲಿಂಗಪ್ಪ ಬಿರಾದಾರ, ಆರ್.ಎಂ. ಯಂಕಂಚಿಕರ, ಎಸ್.ವೈ. ನಾಯ್ಕೋಡಿ, ಲಯನ್ ಶಾಂತು ದುರ್ಗಿ, ಲಯನ್ ಶರಣು ಬೂದಿಹಾಳ, ಉಪನ್ಯಾಸಕ ಅಜ್ಜಪ್ಪ ಸೇರಿದಂತೆ ಸಿ.ಎಂ. ಮನಗೂಳಿ ಮಹಾವಿದ್ಯಾಲಯದ ಎನ್‌ಸಿಸಿ ವಿದ್ಯಾರ್ಥಿಗಳು ಹಾಗೂ ಜೆ.ಎಚ್. ಪಟೇಲ್ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.
ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು “ವ್ಯಸನ ಪ್ರಾಣಕ್ಕೆ ಕುತ್ತು”, “ವ್ಯಸನ ಬಿಡಿ, ಸಂತಸ ಪಡಿ” ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಿದರು.

