ದೇವರಹಿಪ್ಪರಗಿ ವಸತಿ ನಿಲಯದ ಕಾರ್ಮಿಕರಿಂದ ಪತ್ರ ಚಳುವಳಿ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಸತಿ ನಿಲಯ ಕಾರ್ಮಿಕರು ಕನಿಷ್ಠ ವೇತನ ಜಾರಿಗಾಗಿ ಆಗ್ರಹಿಸಿ ಪತ್ರ ಚಳುವಳಿ ಕೈಗೊಂಡರು.
ಪಟ್ಟಣದ ಅಂಚೆ ಕಚೇರಿಗೆ ಆಗಮಿಸಿದ ವಸತಿ ನಿಲಯ ಕಾರ್ಮಿಕರು ಪತ್ರ ಚಳುವಳಿ ಆರಂಭಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಕಾಶೀಬಾಯಿ ಜನಗೊಂಡ ಮಾತನಾಡಿ, ರಾಜ್ಯದ ವಿವಿಧ ಸರ್ಕಾರಿ ವಸತಿ ನಿಲಯಗಳಲ್ಲಿ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರು ಅತ್ಯಂತ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದಾರೆ. ದುಬಾರಿ ಜೀವನ ನಿರ್ವಹಣೆ ಕಷ್ಟಕರವಾಗಿರುವ ಸಂದರ್ಭದಲ್ಲಿ ಸರ್ಕಾರ ನಿಗದಿ ಪಡಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಕಾರ್ಮಿಕರಿಗೆ ಸಮರ್ಪಕವಾಗಿ ನೀಡದೇ ಇರುವುದರಿಂದ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ವಸತಿ ನಿಲಯ ಕಾರ್ಮಿಕರಿಗೆ ಶಾಸನಬದ್ಧವಾಗಿ ನಿಗದಿ ಮಾಡಿರುವ ಕನಿಷ್ಠ ವೇತನವನ್ನು ಪ್ರತಿ ತಿಂಗಳು ನಿಗದಿತ ದಿನಾಂಕದೊಳಗೆ ಪಾವತಿಸುವಂತೆ ಕೂಡಲೇ ಜಾರಿ ಮಾಡಬೇಕು ಹಾಗೂ ಶಾಸನಬದ್ಧ ಸೌಲಭ್ಯಗಳನ್ನು ಖಾತ್ರಿ ಪಡಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಚಳುವಳಿ ಮೂಲಕ ಒತ್ತಾಯಿಸುತ್ತೇವೆ ಎಂದರು.
ಮುರಾರ್ಜಿ ದೇಸಾಯಿ ವಸತಿ ನಿಲಯಗಳ ತಾಲ್ಲೂಕು ಅಧ್ಯಕ್ಷ ಸಂಜೀವಕುಮಾರ, ರೈತ ಮುಖಂಡ ಅಜೀಜ್ ಯಲಗಾರ, ಸಿದ್ದಯ್ಯ, ಸುಮಿತ್ರಾ ಗೂಳಿ, ಜಯಶ್ರೀ, ಸುಮಿತ್ರಾ, ಬೇಬಿ, ಜ್ಯೋತಿ, ಲಕ್ಷ್ಮಿ ಇದ್ದರು.

