ಕಳ್ಳಕವಟಗಿ ಗ್ರಾಮದಲ್ಲಿ ಮಳೆಗಾಗಿ ಗ್ರಾಮಸ್ಥರ ವಿಶೇಷ ಆಚರಣೆ | ಕತ್ತೆಗಳ ಕಾಲು ಮುಟ್ಟಿ ಪ್ರಾರ್ಥನೆ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ಮುಖ ಮಾಡಿರುವ ರೈತರು, ವರುಣನ ಕೃಪೆಗಾಗಿ ವಿವಿಧ ರೀತಿಯ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಕತ್ತೆಗಳ ಮದುವೆ ನೆರವೇರಿಸಿ, ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ಕತ್ತೆಗಳಿಗೆ ಗ್ರಾಮಸ್ಥರು ಕಾಲು ಮುಟ್ಟಿ ನಮಸ್ಕರಿಸಿ ಮಳೆಗಾಗಿ ಪ್ರಾರ್ಥಿಸಿದರು.
ತಾಲ್ಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ಶುಕ್ರವಾರ ಮಳೆ ಸುರಿಯಲಿ, ಬರದ ಛಾಯೆ ದೂರವಾಗಲಿ, ರೈತರ ಹೊಲಗಳಲ್ಲಿ ಹಸಿರು ಚಿಗುರಲಿ ಎಂಬ ಆಶಯದೊಂದಿಗೆ ಗ್ರಾಮಸ್ಥರು ಈ ಕಾರ್ಯ ನೆರವೇರಿಸಿದರು.
ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಬಿತ್ತನೆ ಮಾಡಿದ ಬೆಳೆಗಳಿಗೆ ಸಮರ್ಪಕವಾಗಿ ನೀರು ದೊರೆಯದೆ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳಿಗೂ ನೀರು ಮತ್ತು ಮೇವಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಬರದ ಬಿಸಿ ತೀವ್ರವಾಗಿ ಅನುಭವವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕಳ್ಳಕವಟಗಿ ಗ್ರಾಮದ ಶ್ರೀ ಸಂಗಮನಾಥ ದೇವಾಲಯದ ಆವರಣದಲ್ಲಿ ಗ್ರಾಮಸ್ಥರು ಸಾಂಪ್ರದಾಯಿಕವಾಗಿ ಕತ್ತೆಗಳ ಮದುವೆ ಕಾರ್ಯಕ್ರಮ ಆಯೋಜಿಸಿದರು. ಕತ್ತೆಗಳನ್ನು ಅಲಂಕರಿಸಿ, ಮದುವೆ ಸಂಪ್ರದಾಯದಂತೆ ವಿವಿಧ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಗ್ರಾಮಸ್ಥರು ಕತ್ತೆಗಳ ಕಾಲು ಮುಟ್ಟಿ, ಮಳೆ ಸುರಿದು ನಾಡು ಸುಭಿಕ್ಷವಾಗುವಂತೆ ಪ್ರಾರ್ಥಿಸಿದರು. ಬಳಿಕ ಕತ್ತೆಗಳನ್ನು ಗ್ರಾಮದ ಅಗಸಿಯ ಮೂಲಕ ಗ್ರಾಮಕ್ಕೆ ಬರಮಾಡಿಕೊಂಡು, ಪ್ರಮುಖ ಬೀದಿಗಳಲ್ಲಿ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ತಮ್ಮ ಮನೆಗಳ ಮುಂದೆ ಉಡಿಯಕ್ಕಿ ಇಟ್ಟು, ಆರತಿ ಬೆಳಗಿ, ಕತ್ತೆಗಳಿಗೆ ಪೂಜೆ ಸಲ್ಲಿಸಿದರು. ಮಳೆ ಬಂದು ರೈತರ ಹೊಲಗಳು ಹಸಿರಾಗಲಿ, ಗ್ರಾಮದಲ್ಲಿ ನೀರಿನ ಸಮಸ್ಯೆ ದೂರವಾಗಲಿ ಎಂದು ಪ್ರಾರ್ಥಿಸಿದರು.
ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಹಿರಿಯರ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ನಡೆದುಕೊಂಡು ಬಂದಿದೆ. ಇದೇ ನಂಬಿಕೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗೂಡಿ ಈ ಆಚರಣೆ ನಡೆಸಿದ್ದಾರೆ. ವೈಜ್ಞಾನಿಕವಾಗಿ ಮಳೆಯೊಂದಿಗೆ ಈ ಆಚರಣೆಗೆ ಸಂಬಂಧವಿಲ್ಲದಿದ್ದರೂ, ಮಳೆಯ ನಿರೀಕ್ಷೆಯಲ್ಲಿ ಜನರು ತಮ್ಮ ಸಾಂಪ್ರದಾಯಿಕ ನಂಬಿಕೆಯಂತೆ ಆಚರಣೆ ನಡೆಸುತ್ತಿರುವುದು ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಗ್ರಾಮಸ್ಥರ ವತಿಯಿಂದ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
“ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬುದು ನಮ್ಮ ಹಿರಿಯರ ಕಾಲದಿಂದಲೂ ಇರುವ ನಂಬಿಕೆ. ಈ ವರ್ಷ ಮಳೆ ಕೈಕೊಟ್ಟಿರುವುದರಿಂದ ರೈತರು ಹಾಗೂ ಜಾನುವಾರುಗಳು ಸಂಕಷ್ಟದಲ್ಲಿವೆ. ಮಳೆ ಸುರಿದು ರೈತರಿಗೆ ಅನುಕೂಲವಾಗಲಿ, ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ ಎಂಬ ಆಶಯದಿಂದ ಈ ಸಂಪ್ರದಾಯವನ್ನು ಆಚರಿಸಿದ್ದೇವೆ.”
– ಗಿರಮಲ್ಲಯ್ಯ ಮಠಪತಿ
ಗ್ರಾಮಸ್ಥ
“ಮಳೆ ಕೈಕೊಟ್ಟಿರುವುದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ. ಬಿತ್ತನೆ ಮಾಡಿದ ಬೆಳೆಗಳಿಗೆ ಸಕಾಲಕ್ಕೆ ಮಳೆ ಬಾರದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರು, ಬೆಳೆಗಳಿಗೆ ನೀರು ಹಾಗೂ ಜನರಿಗೆ ಅಗತ್ಯವಿರುವ ಕುಡಿಯುವ ನೀರು ಸಮರ್ಪಕವಾಗಿ ದೊರೆಯಬೇಕು ಎಂಬುದು ಗ್ರಾಮಸ್ಥರ ಆಶಯವಾಗಿದೆ.”
– ಶಿವಪ್ಪ ಪೂಜಾರಿ
ಗ್ರಾಮಸ್ಥ

