– ವೀಣಾ ಹೇಮಂತ್ ಗೌಡ ಪಾಟೀಲ್.ಮುಂಡರಗಿ – ಗದಗ
ಉದಯರಶ್ಮಿ ದಿನಪತ್ರಿಕೆ
ಪಾಲಕರು ಮತ್ತು ಮಕ್ಕಳ ನಡುವಿನ ಸಂಬಂಧ ಅತ್ಯಂತ ಅವಿನಾಭಾವವಾದದ್ದು. ನೀನು ನಕ್ಕರೆ ಹಾಲು ಸಕ್ಕರೆ ಎಂಬಂತೆ ಮಗುವಿನ ನಗುವಿನಲ್ಲಿ ಹಾಲು ಜೇನನ್ನು ಕಾಣುವ ಜಗತ್ತಿನ ಅತ್ಯದ್ಭುತ ಬಂಧ ಪಾಲಕರು ಮತ್ತು ಮಕ್ಕಳದು. ಪಾಲಕರು ಮತ್ತು ಮಕ್ಕಳ ನಡುವೆ ವಯಸ್ಸಿನ ಅಂತರ ಪೀಳಿಗೆಯ ಅಂತರಗಳು ಈಗಾಗಲೇ ಇದ್ದು ಇದೀಗ ಸಾಮಾಜಿಕ ಜಾಲತಾಣಗಳು ಈ ಅಂತರವನ್ನು ಮತ್ತಷ್ಟು ಹೆಚ್ಚಿಸಿವೆ. ಪಾಲಕರು ಹೇಳುವ ಪ್ರತಿಯೊಂದು ಮಾತುಗಳು ಮಕ್ಕಳಿಗೆ ಬೋಧನೆಯಂತೆ ತೋರಿದರೆ ಮಕ್ಕಳು ತಮ್ಮ ಮಾತನ್ನು ಕೇಳುವುದೇ ಇಲ್ಲ ಎಂಬ ದೂರು ಪಾಲಕರದು. ಹಾವೂ ಸಾಯದ ಕೋಲೂ ಮುರಿಯದ ಪರಿಸ್ಥಿತಿ ಯನ್ನು ನಾವಿಂದು ಕಾಣುತ್ತಿದ್ದೇವೆ.

ಸಾಮಾನ್ಯವಾಗಿ ನಾವು ದೇವಸ್ಥಾನಗಳಿಗೆ ಹೋದಾಗ ನಮಗೆ ಪ್ರಸಾದದ ರೂಪದಲ್ಲಿ ಪಂಚಾಮೃತ ದೊರೆಯುತ್ತದೆ ಈ ಪಂಚಾಮೃತದಲ್ಲಿ ಹಾಲು ಮೊಸರು ಕಲ್ಲು ಸಕ್ಕರೆ, ಹಣ್ಣುಗಳು ಮತ್ತು ಜೇನುತುಪ್ಪದ ಮಿಶ್ರಣವಿದ್ದು ಇದರಲ್ಲಿ ಯಾವುದು ಯಾರಿಗೆ ದೊರೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಆದ್ದರಿಂದಲೇ ನಮ್ಮ ಹಿಂದಿನ ಜನ ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದು ಹೇಳುತ್ತಿದ್ದರು.
ಆದರೆ ಇಲ್ಲಿ ಇನ್ನೊಂದು ಪಂಚಾಮೃತವಿದೆ.. ಅದುವೇ ನಮ್ಮ ಪಂಚಮಹಾಭೂತಗಳು. ಭೂಮಿ ಆಕಾಶ, ಅಗ್ನಿ, ಜಲ ಮತ್ತು ವಾಯು ಈ ಪಂಚಮಹಾಭೂತಗಳಿಂದ ಆಗಿರುವ ನಮ್ಮ ಭೂಮಿಯಲ್ಲಿ ನಿಗೂಢವಾದ ಶಕ್ತಿಯು ಅಡಗಿದೆ. ನಮ್ಮ ದೇಹವೂ ಕೂಡ ಪಂಚ ಮಹಾಭೂತಗಳಿಂದಲೇ ಆಗಿದೆ. ನಮ್ಮ ದೇಹದಲ್ಲಿರುವ ಗಟ್ಟಿಯಾದ ದೈಹಿಕ ಭಾಗವು ಮೂಳೆಯ ಭಾಗಗಳು ಭೂಮಿಯನ್ನು, ದೇಹದ ದ್ರವ ಪದಾರ್ಥವು ನೀರನ್ನು, ದೇಹದ ಉಸಿರಾಟದ ಕ್ರಿಯೆಯಲ್ಲಿ ವಾಯುವನ್ನು, ನಮ್ಮ ಆಹಾರವನ್ನು ಪಚನ ಮಾಡುವ ಅಗ್ನಿ ಶಕ್ತಿಯನ್ನು ಜಠರದಲ್ಲಿ ಹೊಂದಿರುವ ಮತ್ತು ಅಲ್ಲಲ್ಲಿ ಖಾಲಿಯಾಗಿರುವ ದೇಹದ ಭಾಗದಲ್ಲಿ ಆಕಾಶದ ತತ್ವವನ್ನು ಹೊಂದಿರುವ ಮಾನವ ದೇಹಕ್ಕೆ ಸಾವು ಒದಗಿದಾಗ ಪಾರ್ಥಿವ ಶರೀರವು ಪಂಚಮಹಾಭೂತಗಳಲ್ಲಿ ಲೀನವಾಗುವಂತೆ ಅಂತಿಮ ಕ್ರಿಯೆಗಳು ಜರುಗುತ್ತವೆ.
ವ್ಯಕ್ತಿಯು ಪಂಚ ಮಹಾಭೂತಗಳ ಜೊತೆಗಿನ ಸಂಪರ್ಕದಲ್ಲಿ ಇದ್ದಾಗ ಆತ ಒತ್ತಡರಹಿತನಾಗಿ,ಆತಂಕ ರಹಿತನಾಗಿ, ಸಂತೋಷ ಮತ್ತು ಸಂತೃಪ್ತಿಗಳಿಂದ ತುಂಬಿದವನಾಗಿ ಇರಲು ಸಾಧ್ಯವಾಗುತ್ತದೆ.ವಿಪರೀತ ಕೆಲಸಗಳನ್ನು ಮಾಡಿ ಪೂರೈಸಿದ ವ್ಯಕ್ತಿಯು ಪರಿಸರದ ಮಧ್ಯದಲ್ಲಿ ವಿಶ್ರಾಂತಿಯನ್ನು ಅರಸಿ ಹೋಗಿ ಕುಳಿತಾಗ ಆತ ಸಂಪೂರ್ಣ ಒತ್ತಡಗಳಿಂದ ಮುಕ್ತನಾಗುತ್ತಾನೆ.. ಅಡುಗೆಯ ಮನೆಯೊಳಗೆ ಧಗೆಯಲ್ಲಿ ಅಡುಗೆಯ ಕೆಲಸ ಕಾರ್ಯಗಳನ್ನು ಪೂರೈಸುವ ಗೃಹಿಣಿ ಮನೆಯ ಹಿತ್ತಲದಲ್ಲಿ ಇರುವ ಮರದ ಕೆಳಗೆ ಇಲ್ಲವೇ ಕಟ್ಟೆಯ ಮೇಲೆ ಕುಳಿತು ಸುತ್ತಲಿನ ಹೊಲವನ್ನು ಇಲ್ಲವೇ ಪ್ರಕೃತಿಯನ್ನು ಆಸ್ವಾದಿಸಿದರೆ ಇಲ್ಲವೇ ದಂದಕ್ಕಿಯಲ್ಲಿ ಇರುವ ಪಶು ಪ್ರಾಣಿಗಳ ಜೊತೆ ಮಿಳಿತಗೊಂಡರೆ ಆಕೆಯ ಅರ್ಧ ದಣಿವು ಮಾಯವಾಗುತ್ತದೆ ಅದಕ್ಕೆ ಕಾರಣ ಪ್ರಪಂಚವು ಪಂಚ ಮಹಾಭೂತಗಳಿಂದ ಕೂಡಿದ್ದು ಆಕೆಗೆ ಸಾಂತ್ವನವನ್ನು ನೀಡುವ ಶಕ್ತಿಯನ್ನು ಹೊಂದಿದೆ.
ನಾವು ಮಾತನಾಡುವ ಮತ್ತು ಕಲಿತ ವಿಷಯಗಳಾದ ಕನ್ನಡ,ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಬೇರೆಯವರು ಕೂಡ ಮಾತನಾಡಿದಾಗ ನಾವು ಅವರೊಂದಿಗೆ ಬೇಗನೆ ಸಂಪರ್ಕವನ್ನು ಸಾಧಿಸುತ್ತೇವೆ,
ಆದರೆ ನಮಗೆ ಗೊತ್ತಿಲ್ಲದ ಭಾಷೆಯಲ್ಲಿ ಬೇರೆಯವರು ನಮ್ಮೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ ನಮಗೆ ಅವರೊಂದಿಗೆ ಸಂವಹನ ಅಸಾಧ್ಯವಾಗುತ್ತದೆ.
ಅಂತೂ ನಮ್ಮ ದೇಹದಲ್ಲಿರುವ ಪಂಚಮಹಾಭೂತ ತತ್ವಗಳು ಪ್ರಕೃತಿಯಲ್ಲಿರುವ ಪಂಚಮಹಾಭೂತ ತತ್ವಗಳೊಂದಿಗೆ ಅನಾಯಾಸವಾಗಿ ಮಿಳಿತಗೊಳ್ಳುತ್ತದೆ ಆದ್ದರಿಂದಲೇ ಪ್ರಕೃತಿಯ ಸಾನಿಧ್ಯದಲ್ಲಿ ಮನುಷ್ಯ ಅತ್ಯಂತ ಸಂತಸದಿಂದ ಇರುತ್ತಾನೆ.

ಈ ಹಿಂದೆ ಮಕ್ಕಳು ಪ್ರಕೃತಿಯ ಸಾನಿಧ್ಯದಲ್ಲಿ ಆಟವಾಡುತ್ತಾ ಇದ್ದಾಗ ಪಾಲಕರು ಮಕ್ಕಳನ್ನು ಮನೆಗೆ ಬಾ ಎಂದು ಕರೆಯಬೇಕಾಗುತ್ತಿತ್ತು, ಆದರೆ ಬದಲಾದ ಸನ್ನಿವೇಶದಲ್ಲಿ ಮಕ್ಕಳು ಹೊರಗೆ ಆಡಲು ಕೂಡ ಪಾಲಕರು ಬಿಡುವುದಿಲ್ಲ,ಅಂತಹ ಪಾಲಕರಿಗೆ ನಾವು ಹೇಳುವುದು ಇಷ್ಟೇ’ ಮಕ್ಕಳು ಹೊರಗೆ ಪ್ರಕೃತಿಯಲ್ಲಿ ಆಡುತ್ತಿದ್ದರೆ ಅವರನ್ನು ಒಳಗೆ ಕರೆಯಬೇಡಿ ಎಂದು.
ಹುಟ್ಟಿದ ಮಗು ಮೊದಲ ಐದು ವರ್ಷ ಮಲಗಿ ಬೆಳೆಯುವುದು, ಎರಡನೇ ಐದು ವರ್ಷ ಆಡಿ ಕಳೆಯುತ್ತದೆ. ಮೂರನೇ ಐದು ವರ್ಷ ತಿಂದು ಕಳೆದರೆ ನಾಲ್ಕನೇ ಐದು ವರ್ಷ ತಿರುಗಿ ಕಳೆಯುತ್ತದೆ. ಮಕ್ಕಳ ಬೆಳವಣಿಗೆಗೆ ಮತ್ತು ಈ ಪಂಚ ಮಹಾಭೂತಗಳಿಗೆ ಅತ್ಯಂತ ನೇರವಾದ ಮತ್ತು ನಿಖರವಾದ ಸಂಪರ್ಕವಿದೆ.
ಮಕ್ಕಳು ತಮ್ಮೊಳಗಿನ ಅಗ್ನಿಯನ್ನು ಶಮನಗೊಳಿಸಿಕೊಳ್ಳಲು ಹೊರಗಿನ ಬಿಸಿಲಿನಲ್ಲಿ ಆಟವಾಡಿ ತಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲೇಬೇಕು. ತಮ್ಮೊಳಗಿನ ವಾಯು ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರಕೃತಿಯಲ್ಲಿ ಸಾಯಂಕಾಲದ ಸಮಯದಲ್ಲಿ ಆಡುವ, ಹಾರಾಡುವ, ತೀವ್ರ ಗತಿಯ ಉಸಿರಾಟ ಕ್ರಿಯೆಯನ್ನು ಹೆಚ್ಚಿಸುವ ಆಟಗಳಲ್ಲಿಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.
ಮಕ್ಕಳ ಮೆದುಳಿನಲ್ಲಿ ಈ ಜಗತ್ತಿನ ಎಲ್ಲಾ ಆಗು ಹೋಗುಗಳ ಅರಿವು ಉಳಿದು ಹೋಗಲು ಅವರು ಪ್ರಕೃತಿಯೊಂದಿಗೆ ಒಡನಾಡಲೇಬೇಕು. ಆದ್ದರಿಂದ ಪಾಲಕರು ತಮ್ಮ ಮಕ್ಕಳ ಆಟೋಟಗಳಿಗೆ ಕಡಿವಾಣ ಹಾಕದೆ ಅವರು ಪ್ರಕೃತಿಯ ಸಾನಿಧ್ಯದಲ್ಲಿ ಹತ್ತು ಹಲವು ಗಿಡ ಮರಗಳ ಕೆಳಗೆ ಆಡುವ, ಕೆರೆ ಹಳ್ಳಗಳಲ್ಲಿ ಸ್ನಾನ ಮಾಡಲು, ಆಟವಾಡಲು ಮಕ್ಕಳಿಗೆ ಅವಕಾಶ ಮಾಡಿಕೊಡಬೇಕು ಮಕ್ಕಳು ನಿಸರ್ಗದ ಮಡಿಲಲ್ಲಿ ಮಗುವಾಗಿ ಹಾಡಿ ಆಡಿ ನಲಿದು ಸಂತೋಷ ಪಡಬೇಕು.


