ಧುಮಕನಾಳ ಗ್ರಾಮದ ಮುಸ್ಲಿಂ ಕಮಿಟಿಯಿಂದ ತಹಶೀಲ್ದಾರ್ಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಧುಮಕನಾಳ ಗ್ರಾಮದಲ್ಲಿರುವ ಮುಸ್ಲಿಂ ಖಬರಸ್ತಾನ್ ಜಮೀನು ಒತ್ತುವರಿಯಾಗುತ್ತಿದೆ ಎಂದು ಆರೋಪಿಸಿ, ಕೂಡಲೇ ಒತ್ತುವರಿ ತೆರವುಗೊಳಿಸಿ ಜಮೀನಿನ ಹದ್ದುಬಸ್ತು ಮಾಡಬೇಕು ಎಂದು ಆಗ್ರಹಿಸಿ ಧುಮಕನಾಳ ಮುಸ್ಲಿಂ ಕಮಿಟಿ ಸದಸ್ಯರು ಗುರುವಾರ ಚಡಚಣ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ತಹಶೀಲ್ದಾರ್ ಪರವಾಗಿ ರವಿಕುಮಾರ ಎಸ್. ಚವ್ಹಾಣ ಅವರು ಮನವಿ ಸ್ವೀಕರಿಸಿ, ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಖಬರಸ್ತಾನ್ ಜಮೀನು ಬಹುದಿನಗಳಿಂದ ನಿರಂತರವಾಗಿ ಅತಿಕ್ರಮಣಕ್ಕೊಳಗಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ಸಮಸ್ಯೆಯಾಗುವ ಸಾಧ್ಯತೆಯಿದ್ದು, ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಅತಿಕ್ರಮಣ ತೆರವುಗೊಳಿಸಬೇಕು. ಅಲ್ಲದೆ, ಸರ್ಕಾರಿ ದಾಖಲೆಗಳ ಆಧಾರದ ಮೇಲೆ ಜಮೀನಿನ ಹದ್ದುಬಸ್ತು ಗುರುತಿಸಿ, ಗಡಿ ಸಂರಕ್ಷಣೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
“ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು”: ಇತ್ತೀಚೆಗೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಸ್ಮಶಾನ ಭೂಮಿಗಳ ಸಂರಕ್ಷಣೆ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸ್ಮಶಾನಕ್ಕೆ ಜಾಗ ಸಿಗುವುದು ಕಷ್ಟವಾಗಿದ್ದು, ಇರುವ ಜಾಗವನ್ನು ಹದ್ದುಬಸ್ತು ಮಾಡಿ ಸಂರಕ್ಷಿಸಬೇಕು. ಒತ್ತುವರಿಯಾಗಿದ್ದರೆ ತಕ್ಷಣ ತೆರವುಗೊಳಿಸಿ, ಗಡಿ ಗುರುತು ಮಾಡಿ ತಂತಿಬೇಲಿ ಅಳವಡಿಸಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿರುವುದಾಗಿ ಗ್ರಾಮದ ಹಿರಿಯ ಲಾಲಸಾಬ ಜಮಾದಾರ ಹೇಳಿದರು.
ಜಿಲ್ಲಾಧಿಕಾರಿಗಳ ಸೂಚನೆಯ ಬೆನ್ನಲ್ಲೇ ಧುಮಕನಾಳ ಗ್ರಾಮದಲ್ಲಿ ಖಬರಸ್ತಾನ್ ಜಮೀನು ಸಂರಕ್ಷಿಸುವಂತೆ ಮನವಿ ಸಲ್ಲಿಸಲಾಗಿದೆ. ಇದೀಗ ತಾಲೂಕು ಆಡಳಿತ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಲಾಲಸಾಬ ಜಮಾದಾರ, ಅಬುಸಾಬ ಶೇಖ, ಇಬ್ರಾಹಿಂ ವಾಲಿಕಾರ, ಮೋದಿಸನಸಾಬ ವಾಲಿಕಾರ, ಡಾ. ಹುಸೇನಿ ಮುಲ್ಲಾ, ಮಹಿಬೂಬ ವಾಲಿಕಾರ, ಹಾಸಿಂಪೀರ್ ವಾಲಿಕಾರ, ಮೀರಾಸಾಬ ಶೇಖ, ಮುಸ್ತಾಕ್ ಮುಲ್ಲಾ, ರಜಾಕ್ ಶೇಖ, ಹುಸೇನ ಶೇಖ, ಅಪ್ಪು ಶೇಖ, ರಹಿಮಾನ ಶೇಖ, ಬಂದಗಿಸಾಬ ಶೇಖ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

