ಸಕಾಲಕ್ಕೆ ವೇತನ, ಇಎಸ್ಐ, ಇಪಿಎಫ್ ಪಾವತಿಗೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪೌರಕಾರ್ಮಿಕರ ಹಿತರಕ್ಷಣೆ ಹಾಗೂ ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡುವುದರೊಂದಿಗೆ ಪ್ರತಿ ತಿಂಗಳು ವಿಳಂಬವಿಲ್ಲದೆ ವೇತನ ಪಾವತಿಸಿ, ಇಎಸ್ಐ ಮತ್ತು ಇಪಿಎಫ್ ವಂತಿಗೆಗಳನ್ನು ನಿಯಮಿತವಾಗಿ ಜಮೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಔದ್ರಾಮ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ-೨೦೧೩ರಡಿ ನಡೆದ ಜಿಲ್ಲಾ ಮಟ್ಟದ ೩ನೇ ತ್ರೈಮಾಸಿಕ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೌರಕಾರ್ಮಿಕರಿಗೆ ವೇತನ ರಸೀದಿ ನೀಡುವುದರ ಜೊತೆಗೆ, ಮಹಾನಗರ ಪಾಲಿಕೆ ಮಾದರಿಯಲ್ಲಿ ಜಿಲ್ಲೆಯ ಪುರಸಭೆ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ನಿಯಮಿತವಾಗಿ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಬೇಕು. ತಪಾಸಣೆ ವೇಳೆ ಗಂಭೀರ ಕಾಯಿಲೆಗಳು ಕಂಡುಬಂದಲ್ಲಿ ನುರಿತ ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸುವುದರ ಜೊತೆಗೆ, ಅನಾರೋಗ್ಯದ ಸಂದರ್ಭದಲ್ಲಿ ರಜೆ ಹಾಗೂ ವಿಶ್ರಾಂತಿಗೆ ಅಗತ್ಯ ಅವಕಾಶ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.
ಖಾಯಂ ಹಾಗೂ ನೇರ ವೇತನ ಪಡೆಯುವ ಪೌರಕಾರ್ಮಿಕರಿಗೆ ಕಾಯ್ದೆಯನ್ವಯ ಅಗತ್ಯ ಸುರಕ್ಷತಾ ಪರಿಕರಗಳು, ಸಮವಸ್ತ್ರ ಹಾಗೂ ಗುರುತಿನ ಚೀಟಿಗಳನ್ನು ವಿತರಿಸಿ, ಅವುಗಳನ್ನು ಕಡ್ಡಾಯವಾಗಿ ಬಳಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಜಾಗೃತಿ ಮೂಡಿಸಬೇಕು. ಕಾರ್ಯಾಗಾರ ಹಾಗೂ ಪೌರಕಾರ್ಮಿಕರ ದಿನಾಚರಣೆ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳ ಕುರಿತು ಅರಿವು ಮೂಡಿಸುವಂತೆ ತಿಳಿಸಿದರು. ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ-೨೦೧೩ರ ಸೆಕ್ಷನ್ ೧೩ ಮತ್ತು ೧೬ರನ್ವಯ ವಿಜಯಪುರ ಜಿಲ್ಲೆಯ ಮಹಾನಗರ ಪಾಲಿಕೆ ಸೇರಿದಂತೆ ಒಟ್ಟು ೧೫ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಸ್ತುತ ಯಾವುದೇ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳು ಇಲ್ಲವೆಂದು ವೆಬ್ಪೋರ್ಟಲ್ನಲ್ಲಿ ದಾಖಲಿಸಲಾಗಿದೆ. ಕಾಯ್ದೆಗೆ ವಿರುದ್ಧವಾಗಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಡೆಯುತ್ತಿರುವುದು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ೫೯೨ ಖಾಯಂ ಪೌರಕಾರ್ಮಿಕರ ಪೈಕಿ ೩೧೪ ಮಂದಿಗೆ ‘ಗೃಹಭಾಗ್ಯ’ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಿರುವ ಕುರಿತು ಮಾಹಿತಿ ನೀಡಲಾಯಿತು. ಇದೇ ವೇಳೆ ಬಿಎಲ್ಸಿ-೧೯೮ ಹಾಗೂ ಎಎಚ್ಪಿ-೧೩೬ರಡಿ ಒಟ್ಟು ೩೩೪ ಮನೆಗಳಿಗೆ ಅನುಮೋದನೆ ದೊರೆತಿದ್ದು, ಬಿಎಲ್ಸಿ ಯೋಜನೆಯಡಿ ೧೭೩ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಉಳಿದ ಮನೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ೧೧೬ ಮನೆಗಳ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ತಿಳಿಸಲಾಯಿತು. ಸಭೆಯಲ್ಲಿ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕ ಸಮಿತಿಯ ನಾಮನಿರ್ದೇಶನದ ಸದಸ್ಯರು ಉಪಸ್ಥಿತರಿದ್ದರು.

