ಪೆಟ್ರೋಲ್ ಬಂಕ್ ಮಾಲೀಕನಿಂದ ಗುಂಡು ಹಾರಿಸಿದ ಆರೋಪ | ಆರೋಪಿ ಪೋಲೀಸರ ವಶಕ್ಕೆ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದ್ದು, ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಮಟ್ಟಿಹಾಳ ಗ್ರಾಮದಲ್ಲಿ ರವಿವಾರ ಗುಂಡಿನ ದಾಳಿ ನಡೆದಿರುವ ಘಟನೆ ನಡೆದಿದ್ದು ಘಟನೆಯಲ್ಲಿ ಸುಖದೇವ ಚಲವಾದಿ (30) ಹಾಗೂ ರಾಜು ಚಲವಾದಿ (40) ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಮಟ್ಟಿಹಾಳ ಗ್ರಾಮದ ಪೆಟ್ರೋಲ್ ಬಂಕ್‌ಗೆ ಸುಖದೇವ ಚಲವಾದಿ ಅವರು ತಮ್ಮ ಸ್ನೇಹಿತ ರಾಜು ಚಲವಾದಿ ಅವರೊಂದಿಗೆ ತೆರಳಿದ್ದರು. ಈ ವೇಳೆ ಪೆಟ್ರೋಲ್ ಬಂಕ್ ಮಾಲೀಕ ಸಂಗಪ್ಪ ಪೂಜಾರಿ (48) ಹಾಗೂ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ವಾಗ್ವಾದದ ಬಳಿಕ ಸಂಗಪ್ಪ ಪೂಜಾರಿ ಅವರು ತಮ್ಮ ಪರವಾನಗಿ ಹೊಂದಿರುವ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಈ ವೇಳೆ ಸುಖದೇವ ಅವರಿಗೆ ಗುಂಡೇಟಿನಿಂದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಾಜು ಚಲವಾದಿ ಅವರಿಗೂ ಗಾಯಗಳಾಗಿರುವ ಮಾಹಿತಿ ಲಭ್ಯವಾಗಿದೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಸಂಗಪ್ಪ ಪೂಜಾರಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ಎಸ್‌ಒಸಿಒ ತಂಡ ಪರಿಶೀಲನೆ ನಡೆಸುತ್ತಿದ್ದು, ಗುಂಡಿನ ದಾಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದೆ.
ಗುಂಡಿನ ದಾಳಿಗೆ ನಿಖರ ಕಾರಣವೇನು ಹಾಗೂ ಘಟನೆಯ ವೇಳೆ ನಿಖರವಾಗಿ ಏನಾಯಿತು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಘಟನೆ ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

